

ಅಥಣಿ (ಬೆಳಗಾವಿ): ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ದೇಸಾಯಿ ಸರ್ಕಲ್ ಎದುರಿಗಿರುವ ದತ್ತ ಮಂದಿರ ಕಾಂಪ್ಲೆಕ್ಸ್ ಮುಂಭಾಗದ ಬೃಹತ್ ಚರಂಡಿಯ (ಗಟರ್) ಮುಚ್ಚಳ ಸಂಪೂರ್ಣವಾಗಿ ಮುರಿದುಬಿದ್ದು ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದೆ. ಈ ಕುರಿತು ಪುರಸಭೆ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ವರ್ಷ ಕಳೆದರೂ ಸಿಗದ ಪರಿಹಾರ:
ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ಎಮ್. ಶರ್ಮಾ ಮಾತನಾಡಿ, “ಈ ಅಪಾಯಕಾರಿ ಸ್ಥಿತಿಯ ಕುರಿತು ದಿನಾಂಕ 04.03.2023 ರಂದೇ ಪುರಸಭೆಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಇಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಅಥಣಿ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿ ತಕ್ಷಣವೇ ಹೊಸ ಚರಂಡಿ ನಿರ್ಮಾಣ ಹಾಗೂ ದೃಢವಾದ ಮುಚ್ಚಳಿಕೆ ಅಳವಡಿಕೆಗೆ ಆಗ್ರಹಿಸಲಾಗಿದೆ” ಎಂದರು.

ಪ್ರಾಣಾಪಾಯದ ಭೀತಿಯಲ್ಲಿ ನಾಗರಿಕರು:
ಸದರಿ ಕಾಂಪ್ಲೆಕ್ಸ್ ಅಡಿಯಲ್ಲಿ ಜೆರಾಕ್ಸ್ ಅಂಗಡಿ, ಚಹಾ ಹೋಟೆಲ್, ಮೆಡಿಕಲ್ ಶಾಪ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿದ್ದು, ದಿನನಿತ್ಯ ನೂರಾರು ಗ್ರಾಹಕರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಂಚರಿಸುತ್ತಾರೆ. ಈಗಾಗಲೇ ಹಲವರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಮಳೆ ಪ್ರಾರಂಭವಾಗಿರುವುದರಿಂದ ಸಿಮೆಂಟ್ ಮುಚ್ಚಳಿಕೆ ಸಂಪೂರ್ಣವಾಗಿ ಹಸಿಯಾಗಿದ್ದು, ಯಾವುದೇ ಕ್ಷಣದಲ್ಲಿ ಒಳಗಡೆ ಕುಸಿದುಬೀಳುವ ಭೀತಿಯಿದೆ.

ಚುನಾವಣೆ ಭರವಸೆ ಮಾತ್ರ, ಸಮಸ್ಯೆಗೆ ಸ್ಪಂದನೆ ಇಲ್ಲ:
“ಚುನಾವಣೆ ಬಂದಾಗ ಅಭಿವೃದ್ಧಿಯ ಭರವಸೆ ನೀಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಜನರ ಜೀವಕ್ಕೆ ಕಂಟಕವಾಗಿರುವ ಇಂತಹ ನಿತ್ಯದ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ. ನಾಗರಿಕರು ಭಯದಿಂದಲೇ ಸಂಚರಿಸುವಂತಾಗಿದೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.


ಉಗ್ರ ಹೋರಾಟದ ಎಚ್ಚರಿಕೆ:
ಯಾವುದೇ ದೊಡ್ಡ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ತಕ್ಷಣವೇ ಹೊಸ ಚರಂಡಿ ನಿರ್ಮಾಣ ಮಾಡಿ ಸುಸಜ್ಜಿತ ಮುಚ್ಚಳಿಕೆ ಅಳವಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.ವರದಿ : ಮಹೇಶ ಶರ್ಮ
About The Author




More Stories
ಕೂಡ್ಲಿಗಿಯಲ್ಲಿ ಒಣಗಿದ ಬೆಳೆ ವೀಕ್ಷಿಸಿದ ಸಚಿವ ಜಮೀರ್: ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಭರವಸೆ
ಅಥಣಿ ಬೆನ್ನೇಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಟ: ಶಾಸಕ ಲಕ್ಷ್ಮಣ್ ಸವದಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಮನವಿ
ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ: ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಟೀಕೆ