August 23, 2026

ಅಥಣಿ ಬೆನ್ನೇಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಟ: ಶಾಸಕ ಲಕ್ಷ್ಮಣ್ ಸವದಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಮನವಿ

ಪಟ್ಟಣದಲ್ಲಿ ಹಾಳಾದ ರಸ್ತೆ, ಚರಂಡಿ ದುರಸ್ತಿಗೆ ಆಗ್ರಹ

ಸಂಪುಟದಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

    ಅಥಣಿ: ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವರಿಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಅಭಿನಂದನೆ ಸಲ್ಲಿಸಿದ್ದು, ಇದೇ ವೇಳೆ ಅಥಣಿ ಪಟ್ಟಣದ ಪ್ರಮುಖ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರು ಹಾಗೂ ಸರ್ಕಾರದ ಗಮನ ಸೆಳೆದಿದ್ದಾರೆ.

    ಬೆನ್ನೇಪೇಟೆಯಲ್ಲಿ ಹೈಟೆಕ್ ಶೌಚಾಲಯಕ್ಕೆ ಒತ್ತಾಯ: “ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಉಚಿತ ಬಸ್ ಪ್ರಯಾಣದಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅಥಣಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಬೆನ್ನೇಪೇಟೆಗೆ ದಿನನಿತ್ಯ ಆಗಮಿಸುವ ನೂರಾರು ರೈತ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಶಾಸಕರು ಭಾನುವಾರದಂದು ಖುದ್ದಾಗಿ ಬೆನ್ನೇಪೇಟೆಗೆ ಭೇಟಿ ನೀಡಿ ಮಹಿಳೆಯರ ಸಮಸ್ಯೆಯನ್ನು ವೀಕ್ಷಿಸಬೇಕು ಹಾಗೂ ತಕ್ಷಣವೇ ಅಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿಕೊಡಬೇಕು,” ಎಂದು ಇಮ್ತಿಯಾಜ್ ಹಿಪ್ಪರಗಿ ಒತ್ತಾಯಿಸಿದರು.

    ರಸ್ತೆ ಹಾಗೂ ಚರಂಡಿ ದುರಸ್ತಿಗೆ ಆಗ್ರಹ: ಪಟ್ಟಣದಲ್ಲಿ 24 ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದಾಗಿ ಗಲ್ಲಿ-ಗಲ್ಲಿಯ ರಸ್ತೆಗಳು ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಚರಂಡಿ ವ್ಯವಸ್ಥೆ ಹಾಳಾಗಿದ್ದು, ಹೊಸ ಒಳಚರಂಡಿ ನಿರ್ಮಾಣ ಹಾಗೂ ಮುಚ್ಚಳಿಕೆ ಅಳವಡಿಕೆ ಕೆಲಸ ತುರ್ತಾಗಿ ನಡೆಯಬೇಕಿದೆ. ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ, ಹಾನಿಗೊಳಗಾದ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಮನವಿ ಮಾಡಿದರು.

    ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ನೀಡಲಿ: ಮಹಿಳೆಯರ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ತನ್ನ ಸಚಿವ ಸಂಪುಟದಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಸೂಕ್ತ ಪ್ರಾತಿನಿಧ್ಯ ಒದಗಿಸಬೇಕು ಎಂದು ಅವರು ಸರ್ಕಾರಕ್ಕೆ ಕೋರಿದ್ದಾರೆ.

    (ವರದಿ: ಮಹೇಶ್ ಶರ್ಮಾ)

    About The Author

    error: Content is protected !!