

ಮೊರಬ ಗ್ರಾಮದ ರೈತರ ಹೊಲಗಳಿಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಜತೆ ಖುದ್ದು ಭೇಟಿ ನೀಡಿದ ಸಚಿವರು

ಕೂಡ್ಲಿಗಿಯನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಶಾಸಕರ ಮನವಿ

ಕೂಡ್ಲಿಗಿ (ವಿಜಯನಗರ): ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದ್ದು, ಬೆಳೆ ಹಾನಿಗೊಳಗಾದ ರೈತರ ಸ್ಥಿತಿಗತಿ ಹಾಗೂ ವಸ್ತುಸ್ಥಿತಿಯನ್ನು ಸಚಿವ ಬಿ.ಝೆಡ್. ಜಮೀರ್ ಅಹಮದ್ ಅವರು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರೊಂದಿಗೆ ಖುದ್ದು ಭೇಟಿ ನೀಡಿ ವೀಕ್ಷಿಸಿದರು.

ತಾಲೂಕಿನ ಮೊರಬ ಗ್ರಾಮದ ಜಿ. ಶಾಂತಲಿಂಗಮ್ಮ, ಕವಳಪ್ಪ ಹಾಗೂ ದೊಡ್ಡಪ್ಪ ಎಂಬುವವರ ಹೊಲಗಳಿಗೆ ತೆರಳಿದ ಸಚಿವರು, ಮಳೆಯಿಲ್ಲದೆ ಬಾಡಿಹೋದ ಬೆಳೆಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದುಕೊಂಡರು.


ಕೂಡ್ಲಿಗಿಗೆ ವಿಶೇಷ ಪರಿಹಾರ ನೀಡಲು ಶಾಸಕರ ಆಗ್ರಹ: ಈ ವೇಳೆ ಮಾತನಾಡಿದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, “ಕೂಡ್ಲಿಗಿ ಕ್ಷೇತ್ರವು ರಾಜ್ಯದಲ್ಲೇ ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ಸಂಪೂರ್ಣ ಒಣಭೂಮಿ ಕೃಷಿಯನ್ನೇ ನೆಚ್ಚಿಕೊಂಡಿರುವ ಹಿಂದುಳಿದ ತಾಲೂಕಾಗಿದೆ. ಇಲ್ಲಿ ಶೇ. 90ರಷ್ಟು ಜನರು ಮಳೆಯಾಶ್ರಿತ ಬೆಳೆಗಳನ್ನು ನೆಚ್ಚಿ ಜೀವಿಸುತ್ತಿದ್ದಾರೆ. ಮೇ ತಿಂಗಳಿನಿಂದ ಸರಿಯಾಗಿ ಮಳೆಯಾಗದ ಕಾರಣ ಶೇ. 80ರಿಂದ 90ರಷ್ಟು ಬೆಳೆಗಳು ನಾಶವಾಗಿವೆ. ತಾಲೂಕಿನಲ್ಲಿ ಬಿತ್ತನೆಯಾಗಿರುವ 35-40 ಸಾವಿರ ಹೆಕ್ಟೇರ್ ಭೂಮಿಯ ಬೆಳೆಗಳು ಸಂಪೂರ್ಣ ಒಣಗಿಹೋಗಿದ್ದು, ರೈತರು ತೀವ್ರ ಸಾಲದ ಬಾಧೆಗೆ ತುತ್ತಾಗಿದ್ದಾರೆ,” ಎಂದು ವಿವರಿಸಿದರು.
“ಕೂಡ್ಲಿಗಿಯನ್ನು ತಕ್ಷಣವೇ ‘ಅತ್ಯಂತ ಬರಪೀಡಿತ ಕ್ಷೇತ್ರ’ ಎಂದು ಘೋಷಿಸಬೇಕು ಹಾಗೂ ಸಂಕಷ್ಟದಲ್ಲಿರುವ ಬಡ ರೈತರಿಗೆ ವಿಶೇಷ ಹೆಚ್ಚುವರಿ ಪರಿಹಾರ ಸಿಗುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು,” ಎಂದು ಸಚಿವ ಜಮೀರ್ ಅಹಮದ್ ಅವರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು: ಸಚಿವ ಜಮೀರ್ ರೈತರ ಅಳಲನ್ನು ಆಲಿಸಿ ಮಾತನಾಡಿದ ಸಚಿವ ಬಿ.ಝೆಡ್. ಜಮೀರ್ ಅಹಮದ್, “ಕ್ಷೇತ್ರದ ಭೀಕರ ಅಭಾವ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ನೈಜ ವಸ್ತುಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನಷ್ಟಕ್ಕೊಳಗಾದ ಎಲ್ಲಾ ರೈತರಿಗೂ ಸರ್ಕಾರದಿಂದ ಸೂಕ್ತ ಮತ್ತು ನ್ಯಾಯಯುತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶಿಫಾರಸು ಮಾಡಲಾಗುವುದು,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಉಪ ಆಯುಕ್ತ ವಿವೇಕ್, ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ)
About The Author




More Stories
ಅಥಣಿ ಬೆನ್ನೇಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಟ: ಶಾಸಕ ಲಕ್ಷ್ಮಣ್ ಸವದಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಮನವಿ
ಅಪಾಯಕಾರಿ ಚರಂಡಿ ಮುಚ್ಚಳಿಕೆ ಸರಿಪಡಿಸಲು ಆಗ್ರಹ — ಪುರಸಭೆ ಹಾಗೂ ತಹಶೀಲ್ದಾರರಿಗೆ ಮತ್ತೆ ಮನವಿ
ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ: ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಟೀಕೆ