August 22, 2026

ಭೋಜನವೆಂಬುದು ಯಜ್ಞ: ಗೋಕರ್ಣದಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹ ನುಡಿ

ಗೋಕರ್ಣ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತಾವಧಿಯಲ್ಲಿ ಇಂತಿಷ್ಟೇ ಆಹಾರ ಸೇವಿಸಬೇಕೆಂಬ ವಿಧಿ ನಿಯಮವಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಸ್ವೀಕರಿಸಿದಂತೆ ಮನುಷ್ಯ ಮೃತ್ಯುವಿಗೆ ಹತ್ತಿರವಾಗುತ್ತಾನೆ. ವಿಧಿವತ್ತಾಗಿ ಮತ್ತು ಹಿತಮಿತವಾಗಿ ಮಾಡುವ ಭೋಜನವು ಯಜ್ಞಕ್ಕೆ ಸಮಾನ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡಿದ ಶ್ರೀಗಳು, ಆಹಾರದ ಪ್ರಾಮುಖ್ಯತೆ ಹಾಗೂ ಸಂಸ್ಕೃತಿಯ ಕುರಿತು ಅನುಗ್ರಹಿಸಿದರು.

ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ:

“ನಮ್ಮೊಳಗಿರುವ ಜಠರಾಗ್ನಿಯೇ ಅಗ್ನಿಯಾಗಿದ್ದು, ನಾವು ಸೇವಿಸುವ ಆಹಾರವೇ ಅದಕ್ಕೆ ಅರ್ಪಿಸುವ ಹವಿಸ್ಸಾಗಿದೆ. ನಮಗಾಗಿ ಅನ್ನದೇ, ದೇಹದಲ್ಲಿರುವ ಪರಮಾತ್ಮನಿಗೆ ಸಮರ್ಪಿಸುವ ಭಾವದಿಂದ ವಿಧಿವತ್ತಾಗಿ ಉಣ್ಣುವ ಭೋಜನವೇ ಯಜ್ಞ. ಪ್ರಾಣಾಗ್ನಿಹೋತ್ರೋಪನಿಷತ್‌ನಲ್ಲಿ ಆಹಾರದ ವಿಧಿ-ನಿಷೇಧಗಳು ಹಾಗೂ ಭೋಜನದ ಮಹತ್ವವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಿದರೆ ಅಗ್ನಿಹೋತ್ರದ ಫಲ ದೊರೆಯುತ್ತದೆ” ಎಂದು ಶ್ರೀಗಳು ವಿವರಿಸಿದರು.

ಊಟ ಮಾಡುವ ಸರಿಯಾದ ಕ್ರಮ:

ಮಾತ್ರವಲ್ಲದೆ, “ನಮಗಾಗಿ ಮಾತ್ರವೇ ಆಹಾರ ತಯಾರಿಸಬಾರದು. ಮನೆಯ ಅತಿಥಿಗಳು, ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಸಂಕಷ್ಟದಲ್ಲಿರುವವರಿಗೆ ಮೊದಲು ಆಹಾರ ನೀಡಿದ ನಂತರವಷ್ಟೇ ನಾವು ಸೇವಿಸಬೇಕು. ಇಲ್ಲವಾದರೆ ಅದು ಪಾಪವಾಗಿ ಪರಿಣಮಿಸುತ್ತದೆ” ಎಂದು ಪ್ರಾಚೀನ ಭಾರತೀಯ ಶಾಸ್ತ್ರಗಳ ಹೃದಯ ವೈಶಾಲ್ಯತೆಯನ್ನು ನೆನಪಿಸಿದರು.

ಪ್ರಾಣಾಂತಕವಾಗಬಹುದಾದ ಕುಲಾಂತರಿ ಗೋಧಿ ಹಾಗೂ ಮೈದಾ:

ಇಂದಿನ ಆಹಾರ ಪದ್ಧತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, “ಪ್ರಾಚೀನ ಕಾಲದಲ್ಲಿದ್ದ ಗೋಧಿ ಇಂದು ತನ್ನ ಮೂಲಸ್ವರೂಪ ಕಳೆದುಕೊಂಡು ಸಂಪೂರ್ಣ ಕುಲಾಂತರಿ (Genetically Modified) ಆಗಿದೆ. ಮನುಷ್ಯನ ಬಳಕೆಗೆ ಯೋಗ್ಯವೇ ಎಂದು ಪ್ರಶ್ನಿಸುವಂತಿರುವ ಈ ಗೋಧಿಯನ್ನು ಮತ್ತಷ್ಟು ಕೆಡಿಸಿ ‘ಮೈದಾ’ ತಯಾರಿಸಲಾಗುತ್ತಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಧುನಿಕ ವಿಜ್ಞಾನವೂ ಹೇಳುತ್ತದೆ. ಜೀರ್ಣಕ್ಕೆ ಕಷ್ಟವಾಗುವ ಆಹಾರದಿಂದ ದೂರವಿರಿ” ಎಂದು ಕಿವಿಮಾತು ಹೇಳಿದರು.

ಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಕಾರ್ಯಕ್ರಮದಲ್ಲಿ ಭಂಡಾರಿ ಸಮಾಜದ ವತಿಯಿಂದ ಶ್ರೀಗಳಿಗೆ ಸ್ವರ್ಣಪಾದುಕಾ ಪೂಜೆ ನೆರವೇರಿತು. ಭಂಡಾರಿ ಸಮಾಜದ ಅಧ್ಯಕ್ಷ ಶಿವು ಭಂಡಾರಿ, ಸುಬ್ರಾಯ ಭಂಡಾರಿ ಮನುವಳ್ಳಿ, ಹರಿಹರ ಭಂಡಾರಿ ಕಡತೋಕ ಸೇರಿದಂತೆ ಸಮಾಜದ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

ಸಭೆಯಲ್ಲಿ CMR ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಶಿವಕುಮಾರ್, ಚಂದ್ರಶೇಖರ ದಂಟಿನಮನೆ, ಜಿ.ವಿ. ಹೆಗಡೆ, ಸತೀಶ ಭಟ್ಟ ಧಾರೇಶ್ವರ ಹಾಗೂ ದಿನ ಪ್ರಧಾನರಾದ ಪಾದೇಕಲ್ಲು ವಿಷ್ಣು ಭಟ್ ದಂಪತಿ ಉಪಸ್ಥಿತರಿದ್ದರು.

About The Author

error: Content is protected !!