

ಭೋಜನವೆಂಬುದು ತಪಸ್ಸು, ಸರಿಯಾದ ಆಹಾರ ಕ್ರಮದಿಂದ ರೋಗ-ಪಾಪ ನಾಶ

ಗೋಕರ್ಣದ ಅಶೋಕೆಯಲ್ಲಿ ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಸಲ್ಲಿಕೆ

ಗೋಕರ್ಣ: “ಊಟ ಮಾಡದೆಯೇ ಋಷಿಗಳಂತೆ ತಪಸ್ಸನ್ನು ಆಚರಿಸುವುದು ಒಂದು ವಿಧವಾದರೆ, ಸರಿಯಾದ ಕ್ರಮದಲ್ಲಿ ಆಹಾರ ಸ್ವೀಕರಿಸುವ ಮೂಲಕವೂ ತಪಸ್ಸಿನ ಫಲವನ್ನು ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳುತ್ತದೆ. ಹಾಗಾಗಿ ಭೋಜನ ಎಂಬುದು ಕೂಡ ಒಂದು ತಪಸ್ಸು,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯಲ್ಲಿರುವ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಅಂಗವಾಗಿ ಶನಿವಾರ (08.08.2026) ನಡೆದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.



ಹಿತ-ಮಿತ-ಮೇಧ್ಯ ಸೂತ್ರ: “ಪಾಪದ ದಾರಿಯಲ್ಲಿ ಆಹಾರವೇ ಪ್ರಧಾನವಾಗಿದ್ದು, ಅದು ನಮ್ಮೊಳಗೆ ಸೇರಿದ ನಂತರ ಬಾಧೆಯನ್ನು ನೀಡಲು ಆರಂಭಿಸುತ್ತದೆ. ಸರಿಯಾದ ಭೋಜನ ಕ್ರಮದಿಂದ ರೋಗ ಹಾಗೂ ಪಾಪ ಎರಡನ್ನೂ ನಾಶಮಾಡಬಹುದು. ಯಾವುದು ಒಳ್ಳೆಯದೋ ಅದು ಹಿತ ಹಾಗೂ ಯಾವುದು ಇಷ್ಟವೋ ಅದು ಪ್ರಿಯ. ಹಿತವಾದದ್ದೇ ಪ್ರಿಯವಾದರೆ ಅದು ದೇಹಕ್ಕೂ ಮನಸ್ಸಿಗೂ ಅತ್ಯಂತ ಹಿತಕರ,” ಎಂದು ಶ್ರೀಗಳು ಅಭಿಪ್ರಾಯಪಟ್ಟರು.
“ವಿಧಿಪೂರ್ವಕವಾದ ಪ್ರಾಣಾಯಾಮ ಹಾಗೂ ಸಮರ್ಪಕ ಆಹಾರ ಕ್ರಮದಿಂದ ಶ್ವಾಸ ಮತ್ತು ಆಹಾರದ ಮೂಲಕ ದೇಹದ ಪಾಪವನ್ನು ತೊಳೆದುಕೊಳ್ಳಬಹುದು. ವ್ಯಕ್ತಿಯ ವೃತ್ತಿ ಮತ್ತು ಹಿನ್ನೆಲೆಯನ್ನು ಆಧರಿಸಿ ಹಿತ-ಮಿತಗಳು ನಿರ್ಧಾರವಾಗುತ್ತವೆ. ಯಜ್ಞಕ್ಕೆ ಯೋಗ್ಯವಾದ ‘ಮೇಧ್ಯ’ (ಉತ್ಕೃಷ್ಟ) ಆಹಾರವನ್ನು ಸ್ವೀಕರಿಸುವುದರಿಂದ ಜಠರಾಗ್ನಿಯನ್ನು ಜಾಗೃತಗೊಳಿಸಬಹುದು. ದೇಹದ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಅಗ್ನಿಜಾಗರಣವೇ ಸೂಕ್ತ ಉತ್ತರ,” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ COO ಬಿ.ಎಸ್. ರಾಜಾ, ರಾಮಮೂರ್ತಿ ಕೆ.ಬಿ. ದಂಪತಿಗಳು, ಸುರೇಶ ಕಲ್ಲಬ್ಬೆ, ಉದಯ ಭಟ್, ಕಿರಣ ಹೆಗಡೆ ಹಾಗೂ ದಿನ ಪ್ರಧಾನರಾದ ಗುಂಡಿ ಮಂಜಪ್ಪ ದಂಪತಿಗಳು ಉಪಸ್ಥಿತರಿದ್ದು ಆಶೀರ್ವಾದ ಪಡೆದರು.
ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀಮಠಕ್ಕೆ ಪರಂಪರಾಗತವಾಗಿ ನಡೆದುಕೊಳ್ಳುತ್ತಿರುವ ಹಾಲಕ್ಕಿ ಸಮಾಜದ ಬಂಧುಗಳು ಸಮರ್ಪಿಸಿದ ಸ್ವರ್ಣಪಾದುಕಾ ಪೂಜೆಯನ್ನು ಸ್ವೀಕರಿಸಿದ ಶ್ರೀಗಳು, “ಹಾಲಕ್ಕಿ ಸಮಾಜದವರು ಶ್ರೀಮಠದ ಕೆಕ್ಕಾರು ಶಾಖೆಗೆ ಪಾರಂಪರಿಕ ಶ್ರದ್ಧಾಭಕ್ತಿ ಸಲ್ಲಿಸುತ್ತಾ ಬಂದಿದ್ದಾರೆ. ಈ ಸಮಾಜದ ಜೊತೆ ಶ್ರೀಮಠ ಸದಾ ಇರಲಿದ್ದು, ಸರ್ಕಾರವೂ ಹಾಲಕ್ಕಿ ಸಮಾಜಕ್ಕೆ ಸಲ್ಲಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು,” ಎಂದು ಆಶೀರ್ವಚನ ನೀಡಿ, ಪ್ರಸಾದ ರೂಪದಲ್ಲಿ ಅಕ್ಕಿಯನ್ನು ನೀಡಿದರು.
ಹಾಲಕ್ಕಿ ಸಮಾಜದ ಮುಖಂಡ ಡಾ. ಹನುಮಂತ ಗೌಡ ಮಾತನಾಡಿ, “ತಲೆತಲಾಂತರದಿಂದ ಶ್ರೀಮಠದ ಆಶೀರ್ವಾದದಿಂದ ನಮ್ಮ ಸಮಾಜ ಸನ್ಮಾರ್ಗದಲ್ಲಿ ಸಾಗುತ್ತಿದ್ದು, ನೆಮ್ಮದಿ ಕಂಡುಕೊಂಡಿದೆ,” ಎಂದರು. ಇದೇ ವೇಳೆ ಹಾಲಕ್ಕಿ ಜಾನಪದ ಹಾಡಿನ ಮೂಲಕ ಶ್ರೀಗುರುಪೀಠಕ್ಕೆ ಭಕ್ತಿ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಸ್. ಗೌಡರ್, ಎಸ್. ಜಿ. ಗೌಡರ್, ಮಂಜುನಾಥ ಗೌಡರ್ ಕೆಕ್ಕಾರು ಸೇರಿದಂತೆ ನೂರಾರು ಹಾಲಕ್ಕಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ