

ಪತಂಜಲಿ ಯೋಗ ಸಮಿತಿಯಿಂದ ಯೋಗ ಶಿಬಿರ: ‘ನಶಾ ಮುಕ್ತ ಭಾರತ’ ನಿರ್ಮಾಣಕ್ಕೆ ಶಿಬಿರಾರ್ಥಿಗಳ ಶಪಥ

ಯೋಗ, ಧ್ಯಾನ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ರೋಗ ಮುಕ್ತ ಬದುಕು ಸಾಧ್ಯ: ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ


ಕೃಷ್ಣರಾಜಪೇಟೆ (ಮಂಡ್ಯ): “ಆರೋಗ್ಯವಂತ ಜೀವನಕ್ಕೆ ಯೋಗವು ಸಂಜೀವಿನಿಯಾಗಿದ್ದು, ನಿಯಮಿತ ಆಹಾರ ಪದ್ಧತಿ ಹಾಗೂ ಶಿಸ್ತುಬದ್ಧ ಜೀವನದಿಂದ ರೋಗರುಜಿನಗಳನ್ನು ದೂರವಿಟ್ಟು ನೆಮ್ಮದಿಯ ಬದುಕು ನಡೆಸಲು ಸಾಧ್ಯ,” ಎಂದು ಸಮಾಜ ಸೇವಕ ಹಾಗೂ ರಾಜ್ಯ ಆರ್‌ಟಿಒ (RTO) ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ಕೃಷ್ಣರಾಜಪೇಟೆ ತಾಲೂಕಿನ ಶರಣ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದಲ್ಲಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


“ಇಂದಿನ ಒತ್ತಡದ ಜೀವನ ಹಾಗೂ ಪಿಜ್ಜಾ, ಬರ್ಗರ್‌ನಂತಹ ಜಂಕ್ ಫುಡ್ ಸೇವನೆಯಿಂದ ಜನರು ಅಮೂಲ್ಯ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಯೋಗ ಮತ್ತು ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ, ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ಶಿಸ್ತುಬದ್ಧ ಜೀವನ ನಡೆಸುವುದನ್ನು ಪ್ರತಿಯೊಬ್ಬರೂ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು,” ಎಂದು ಅವರು ಮನವಿ ಮಾಡಿದರು.
ವಿಶ್ವಕ್ಕೆ ಭಾರತವೇ ಯೋಗ ಗುರು:
ತುಮಕೂರಿನ ಪತಂಜಲಿ ಯೋಗ ಸಮಿತಿ ಸಂಚಾಲಕ, ಯೋಗಗುರು ವೀರಣ್ಣ ಮಾತನಾಡಿ, “ಭಾರತವು ವಿಶ್ವಕ್ಕೆ ಯೋಗದ ಮಹತ್ವವನ್ನು ಸಾರಿದ ಜಗದ್ಗುರು. ಯುವಜನರು ಸಮಯ ವ್ಯರ್ಥ ಮಾಡದೆ ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಯೋಗ-ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸೇವಾ ಮನೋಭಾವನೆ ಬದುಕಿನ ಉಸಿರಾಗಬೇಕು,” ಎಂದರು.

ದುಶ್ಚಟಗಳಿಂದ ದೂರವಿದ್ದು ಜ್ಞಾನವಂತರಾಗಿ: ಸ್ವಾಮೀಜಿ ಕರೆ
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾಪನಹಳ್ಳಿ ಗವಿಮಠದ ಪೀಠಾಧಿಪತಿ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, “ಯುವಜನರು ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳಂತಹ ದುಶ್ಚಟಗಳಿಂದ ದೂರವಿರಬೇಕು. ಪೌಷ್ಟಿಕ ಆಹಾರ ಸೇವಿಸಿ, ಪುಸ್ತಕ-ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕು. ವಿದ್ಯೆ ಎಂಬ ಜ್ಞಾನದ ಬೆಳಕು ಯಾರಿಂದಲೂ ಕದಿಯಲಾಗದ ಬಹುದೊಡ್ಡ ಆಸ್ತಿ,” ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ಪತಂಜಲಿ ಯೋಗ ಸಮಿತಿ ಸಂಚಾಲಕ ಯೋಗಗುರು ಸೋಮಶೇಖರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಾ. ಕೆ.ಆರ್. ನೀಲಕಂಠ, ಪತ್ರಕರ್ತ ಗಂಜಿಗೆರೆ ಮಹೇಶ್, ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ. ರಘು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಶಿಬಿರದಲ್ಲಿ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು, ‘ನಶಾ ಮುಕ್ತ ಭಾರತ’ ನಿರ್ಮಾಣಕ್ಕೆ ಶ್ರಮಿಸುವುದಾಗಿ ಶಪಥ ಮಾಡಿದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ (ಮಂಡ್ಯ)
About The Author




More Stories
ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 74 ಲಕ್ಷ ರೂ. ಲಾಭ: ಅಧ್ಯಕ್ಷ ಕೆ.ವೈ. ಹರೀಶ್ ಮಾಹಿತಿ.
ಮಂದಗೆರೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುಟಾಣಿ ಮಕ್ಕಳಿಗೆ ನಟ ಮಧು ಮಂದಗೆರೆಯಿಂದ ಸಿಹಿ ವಿತರಣೆ.
ಸಿದ್ದರಾಮಯ್ಯ ಶೋಷಿತ ವರ್ಗಗಳ ಉಸಿರು, ಸಾಮಾಜಿಕ ನ್ಯಾಯದ ಹರಿಕಾರ: ಕೆ.ಆರ್.ಪೇಟೆಯಲ್ಲಿ ಬಿ. ನಾಗೇಂದ್ರಕುಮಾರ್ ಬಣ್ಣನೆ