

ಮಾಜಿ ಸಿಎಂ ಸಿದ್ದರಾಮಯ್ಯ ಅವರ 79ನೇ ಹುಟ್ಟುಹಬ್ಬದ ಸಂಭ್ರಮ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಅನಾಥಾಶ್ರಮದ ವೃದ್ಧರಿಗೆ, ನಿರ್ಗತಿಕರಿಗೆ ಅನ್ನಸಂತರ್ಪಣೆ ನಡೆಸಿ ಸಿಹಿ ವಿತರಿಸಿದ ಕಾಂಗ್ರೆಸ್ ಮುಖಂಡರು

ಕೃಷ್ಣರಾಜಪೇಟೆ (ಮಂಡ್ಯ): “ಕರ್ನಾಟಕದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ ಭಾಗ್ಯಗಳ ಸರದಾರ. ಅವರು ಶೋಷಿತ ವರ್ಗಗಳ ಧೀಮಂತ ನಾಯಕ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ,” ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ನಾಗೇಂದ್ರಕುಮಾರ್ ಬಣ್ಣಿಸಿದರು.

ಸಿದ್ದರಾಮಯ್ಯ ಅವರ 79ನೇ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೆ.ಆರ್. ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಬಿ. ನಾಗೇಂದ್ರಕುಮಾರ್, “ಕೊಟ್ಟ ಮಾತಿಗೆ ತಪ್ಪದ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯನವರು ಹೈಕಮಾಂಡ್ ಸೂಚನೆ ನೀಡಿದ ತಕ್ಷಣವೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ರಂಗದಲ್ಲಿ ಮಾದರಿಯಾಗಿದ್ದಾರೆ. ಅವರ ಜನಪರ ಆಡಳಿತ ಮತ್ತು ಅಭಿವೃದ್ಧಿಯ ತುಡಿತ ನಾಡಿನ ಎಲ್ಲಾ ರಾಜಕಾರಣಿಗಳಿಗೂ ಪ್ರೇರಣೆ. ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿಯು ಅವರಿಗೆ ನೂರು ಕಾಲ ಉತ್ತಮ ಆರೋಗ್ಯ, ಸಮೃದ್ಧಿ ಹಾಗೂ ದೀರ್ಘಾಯುಷ್ಯ ಕರುಣಿಸಲಿ,” ಎಂದು ಪ್ರಾರ್ಥಿಸಿದರು.
ಅನಾಥಾಶ್ರಮದಲ್ಲಿ ಅನ್ನಸಂತರ್ಪಣೆ:
ಹುಟ್ಟುಹಬ್ಬದ ಸಂಭ್ರಮಾಚರಣೆಯ ಭಾಗವಾಗಿ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿ ಇರುವ ‘ಮಾತೃಭೂಮಿ ಅನಾಥಾಶ್ರಮ’ದಲ್ಲಿರುವ ವಯೋವೃದ್ಧರು ಹಾಗೂ ನಿರ್ಗತಿಕರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಖುದ್ದಾಗಿ ಊಟ ಬಡಿಸಿ, ಸಿಹಿ ವಿತರಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ. ಹರೀಶ್, ಜಿ.ಪಂ. ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕೊಡಗಹಳ್ಳಿ ಮಂಜೇಗೌಡ, ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು ಉಪಸ್ಥಿತರಿದ್ದರು.
ಹಾಗೆಯೇ ಪ್ರಮುಖ ಮುಖಂಡರಾದ ಎಂ.ಡಿ. ಕೃಷ್ಣಮೂರ್ತಿ, ಸಾಸಲು ಈರಪ್ಪ, ಕೆ.ಆರ್. ರವೀಂದ್ರಬಾಬು, ಅಕ್ಕಿಹೆಬ್ಬಾಳು ದಿವಾಕರ್, ಸ್ನೇಹಿತ ರಮೇಶ್, ಸಣ್ಣ ನಿಂಗೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಕಾಡುಮೆಣಸ ಚಂದ್ರು, ಜಮೀಲ್ ಅಹಮದ್, ಆಫೀಸುಲ್ಲಾ ಶರೀಫ್, ಮೀನಾಕ್ಷಿ, ಲೋಲಾಕ್ಷಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ (ಮಂಡ್ಯ)
About The Author




More Stories
ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 74 ಲಕ್ಷ ರೂ. ಲಾಭ: ಅಧ್ಯಕ್ಷ ಕೆ.ವೈ. ಹರೀಶ್ ಮಾಹಿತಿ.
ಮಂದಗೆರೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುಟಾಣಿ ಮಕ್ಕಳಿಗೆ ನಟ ಮಧು ಮಂದಗೆರೆಯಿಂದ ಸಿಹಿ ವಿತರಣೆ.
ದೇವರು-ಧರ್ಮದ ಮಾರ್ಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ: ಕೆ.ಆರ್.ಪೇಟೆಯಲ್ಲಿ ಬಿ. ನಾಗೇಂದ್ರಕುಮಾರ್ ಪ್ರತಿಪಾದನೆ