

ಪ್ರತಿಯೊಬ್ಬ ಜೀವಿಯೊಳಗೂ ಅಗ್ನಿರೂಪದಲ್ಲಿ ನೆಲಸಿದ್ದಾನೆ ಭಗವಂತ

ಶಕ್ತಿಯ ಮೂಲಗಳನ್ನೇ ದೇವರೆಂದು ಭಾವಿಸುವುದು ಭಾರತೀಯ ಸಂಸ್ಕೃತಿಯ ಹೆಮ್ಮೆ

ಮಾಜಿ ಸಚಿವ ಶಿವಾನಂದ ನಾಯ್ಕ್, ಗೋವಿಂದ ನಾಯ್ಕ್ ಸೇರಿದಂತೆ ಗಣ್ಯರಿಂದ ಶ್ರೀಗಳ ದರ್ಶನ

ಗೋಕರ್ಣ (ಆಗಸ್ಟ್ 13): “ನಾವು ಸೇವಿಸಿದ ಆಹಾರವನ್ನು ಜೀರ್ಣವಾಗಿಸಿ ದೇಹಕ್ಕೆ ಚೈತನ್ಯವನ್ನು ತುಂಬುವುದು ಜಠರಾಗ್ನಿಯ ದೊಡ್ಡ ಪವಾಡ. ಸ್ವೀಕರಿಸಿದ ಆಹಾರವನ್ನೇ ಜೀವಿಯ ಭಾವವನ್ನಾಗಿ ಪರಿವರ್ತಿಸುವುದು ನಿಜವಾದ ಚಮತ್ಕಾರ. ಈ ಕ್ರಿಯೆಯು ನಿತ್ಯ ಸ್ವಯಂಚಾಲಿತವಾಗಿ ನಡೆಯುತ್ತಿರುವುದರಿಂದ ಇದು ನಮಗೆ ದೊಡ್ಡ ಪವಾಡವೆಂದು ಭಾಸವಾಗುತ್ತಿಲ್ಲವಷ್ಟೇ,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಗಸ್ಟ್ 13ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ ಕುರಿತು ಶ್ರೀಗಳು ಪ್ರವಚನ ಅನುಗ್ರಹಿಸುತ್ತಿದ್ದರು.
“ವಾಹನದಲ್ಲಿ ಸ್ಪಾರ್ಕ್ ಪ್ಲಗ್ (Spark Plug) ಚಾಲನೆಗೆ ಶಕ್ತಿ ನೀಡುವಂತೆ, ಜಠರಾಗ್ನಿಯು ಆಹಾರವನ್ನು ಶಕ್ತಿಯಾಗಿಸಿ ಶರೀರಕ್ಕೆ ಚೈತನ್ಯ ಒದಗಿಸುತ್ತದೆ. ಹಸಿವು, ಜೀರ್ಣಕ್ರಿಯೆ ಹಾಗೂ ಶರೀರದ ಉಷ್ಣತೆಗೆ ಜಠರಾಗ್ನಿಯೇ ಕಾರಣ. ಈ ಅಗ್ನಿಯ ಸಮತೋಲನ ತಪ್ಪಿದರೆ ಆರೋಗ್ಯ ಏರುಪೇರಾಗುತ್ತದೆ. ಮಹಾನಾರಾಯಣೋಪನಿಷತ್ ಹಾಗೂ ಭಗವದ್ಗೀತೆಯಲ್ಲೂ ‘ನಾನೇ ಜಠರಾಗ್ನಿಯಾಗಿದ್ದೇನೆ’ ಎಂದು ಭಗವಂತ ಸ್ವಯಂ ಸಾರಿದ್ದಾನೆ. ಆಧುನಿಕ ವಿಜ್ಞಾನ ಹೇಳುವ ‘ಸ್ಟೊಮಕ್ ಆಸಿಡ್’ (Stomach Acid) ಕೂಡ ಅಗ್ನಿಯ ಗುಣಲಕ್ಷಣಗಳನ್ನೇ ಹೊಂದಿದೆ,” ಎಂದು ಶ್ರೀಗಳು ವಿವರಿಸಿದರು.
ವಿಶೇಷ ಸಂದೇಶ:
“ದೇವರಿಗೆ ನೈವೇದ್ಯ ಅರ್ಪಿಸಿ ಆಹಾರ ಸೇವಿಸುವ ಪದ್ಧತಿಯು ಆಹಾರದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವನೆಯನ್ನು ಬೆಳೆಸುವ ಆಚರಣೆಯಾಗಿದೆ. ಆಹಾರವನ್ನು ಕೇವಲ ದೇಹಕ್ಕೆ ಸೇರುವ ವಸ್ತುವಾಗಿ ನೋಡದೆ, ಜೀವನವನ್ನು ಪೋಷಿಸುವ ಪವಿತ್ರ ಅಂಶವಾಗಿ ನೋಡುವ ದೃಷ್ಟಿಕೋನವನ್ನು ನಮ್ಮ ಪರಂಪರೆ ನೀಡಿದೆ.” — ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಭಟ್ಕಳದ ಮಾಜಿ ಸಚಿವ ಶಿವಾನಂದ ನಾಯ್ಕ್, ಪಶ್ಚಿಮಘಟ್ಟ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಸಾಮಾಜಿಕ ಕಾರ್ಯಕರ್ತ ಡಾ. ಜಿ.ಜಿ. ಹೆಗಡೆ ಹಾಗೂ ಜಿ. ಎಸ್. ಹೆಗಡೆ ಧರ್ಮಸಭೆಯಲ್ಲಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಗುರುಭಿಕ್ಷಾ ಸೇವೆ: ಕುಮಟಾ ಹವ್ಯಕ ಮಂಡಲದ ಮೂರೂರು-ಕಲ್ಲಬೆ, ಹೆಗಡೆ, ಗುಡೆ ಅಂಗಡಿ, ಉಪ್ಪಿನ ಪಟ್ಟಣ, ಗೋವಾ ಹಾಗೂ ಅಚವೆ ಹವ್ಯಕ ವಲಯಗಳ ಪರವಾಗಿ ದತ್ತಾತ್ರೆಯ ಚಂದ್ರಶೇಖರ್ ಭಟ್ ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ವೇ.ಮೂ. ಕೇಶವಪ್ರಸಾದ್ ಭಟ್ಟ ಕೂಟೇಲು, ಜಿ. ಎಸ್. ಭಟ್ಟ ಉಪ್ಪುಂದ, ಸೌಮ್ಯ ಮಧ್ಯಸ್ಥ ಹಾಗೂ ದಿನ ಪ್ರಧಾನರಾದ ಸುಬ್ರಾಯ ಹೆಗಡೆ ಮಾನ್ಯ ದಂಪತಿಗಳು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ