August 23, 2026

ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ

ಅಥಣಿ (ಬೆಳಗಾವಿ): ತಾಲೂಕಿನ ಅಥಣಿ ಪಟ್ಟಣದ ವಾರ್ಡ್ ನಂಬರ್ 17ರಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ಸಡಗರ ಹಾಗೂ ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಲಾಯಿತು.

ಜೆಡಿಎಸ್ ಮುಖಂಡರಾದ ರಾಜು ಡವರಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜು ಡವರಿ ಅವರು, ದೇಶ ಕಾಯುವ ಯೋಧರ ಸೇವೆಯನ್ನು ಸ್ಮರಿಸಿದರು:

“ದೇಶದ ಗಡಿಯಲ್ಲಿ ಹಗಲು-ರಾತ್ರಿ, ಮಳೆ, ಗಾಳಿ ಹಾಗೂ ಕೊರೆಯುವ ಚಳಿಯನ್ನು ಲೆಕ್ಕಿಸದೆ ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಭಾರತೀಯ ಸೈನಿಕರ ತ್ಯಾಗ ಮತ್ತು ಬಲಿದಾನಗಳು ಅನನ್ಯ. ಯೋಧರು ಗಡಿಯಲ್ಲಿ ಕಾವಲು ಕಾಯುವುದರಿಂದಲೇ ನಾವಿಲ್ಲಿ ನೆಮ್ಮದಿಯಿಂದ ಸುರಕ್ಷಿತವಾಗಿರಲು ಸಾಧ್ಯವಾಗಿದೆ.”

“ಭಾರತವು ಎಂದಿಗೂ ಯಾರ ಮೇಲೆಯೂ ಅಕ್ರಮಣ ಮಾಡುವುದಿಲ್ಲ, ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ತಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಸುರಕ್ಷತೆಗಾಗಿ ನಿಂತಿರುವ ಪ್ರತಿಯೊಬ್ಬ ಜವಾನನಿಗೂ ಹಾಗೂ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೂ ದೇಶವೇ ಕೃತಜ್ಞವಾಗಿದೆ,” ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು,

“ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಶ್ರದ್ಧೆಯಿಂದ ಆಚರಿಸಬೇಕು, ಆದರೆ ಯಾವುದೇ ಕಾರಣಕ್ಕೂ ಅನ್ಯ ಧರ್ಮವನ್ನು ನಿಂದಿಸಬಾರದು. ಈ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಜನರೆಲ್ಲರಿಗೂ ದೇವರು ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ,” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದರು.

About The Author

error: Content is protected !!