August 21, 2026

ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ

ಗೋಕರ್ಣ: ಕನ್ನಡ ಅಥವಾ ಸಂಸ್ಕೃತ ವರ್ಣಮಾಲೆಯಲ್ಲಿ ಮಹಾಪ್ರಾಣ ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ ದೇಹದಲ್ಲಿ ಅಗ್ನಿ ಜಾಗೃತಿ ಉಂಟಾಗುತ್ತದೆ. ಮಹಾಪ್ರಾಣ ಉಚ್ಚರಿಸುವಾಗ ನಾಭಿಸ್ಥಾನದಲ್ಲಿ ಉಂಟಾಗುವ ಒತ್ತಡವು ಅಗ್ನಿಯ ಬಲವೃದ್ಧಿಗೆ ಕಾರಣವಾಗಲಿದ್ದು, ಶಬ್ದಗಳ ಸರಿಯಾದ ಉಚ್ಚಾರಣೆಯಿಂದ ಅಪ್ರತ್ಯಕ್ಷವಾಗಿ ಅಗ್ನಿಯನ್ನು ಪ್ರಚೋದಿಸಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 19.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡುತ್ತಾ ಶ್ರೀಗಳು ಈ ವಿಷಯಗಳನ್ನು ತಿಳಿಸಿದರು.

ಜಠರಾಗ್ನಿಯ ಪ್ರಾಮುಖ್ಯತೆ: ಜೀರ್ಣಕ್ರಿಯೆಯನ್ನು ಅರಿತುಕೊಳ್ಳುವುದು ಆಹಾರ ಜೀರ್ಣ ಮಾಡಿಕೊಂಡಷ್ಟು ಸುಲಭವಲ್ಲ. ದೇಹದಲ್ಲಿರುವ 18 ಪ್ರಮುಖ ಅಗ್ನಿಗಳು ಜಠರಾಗ್ನಿಯನ್ನೇ ಆಶ್ರಯಿಸಿವೆ. ವಿಧಿವತ್ತಾದ, ಹಿತ-ಮಿತ ಹಾಗೂ ಯುಕ್ತವಾದ ಆಹಾರ ಪಾನೀಯಗಳೇ ಜಠರಾಗ್ನಿಗೆ ಇಂಧನ. ದೇಹಕ್ಕೆ ಶಕ್ತಿ ಹಾಗೂ ಆಯುಷ್ಯ ಸಿಗುವುದೇ ಈ ಅಗ್ನಿಯಿಂದ.

ಹೊಟ್ಟೆಯೊಳಗೊಂದು ಅಡುಗೆಮನೆ: ಕೃಕರ ಪ್ರಾಣವು ಹಸಿವಿನ ಸೂಚನೆ ನೀಡಿದರೆ, ಪ್ರಾಣ ವಾಯು ಆಹಾರವನ್ನು ಜಠರಕ್ಕೆ ತಳ್ಳುತ್ತದೆ. ಸಮಾನ ವಾಯು ಆಹಾರವನ್ನು ಪಾಕ ಮಾಡಿ ಸಾರ-ಕಲ್ಮಷ ವಿಂಗಡಿಸಿದರೆ, ವ್ಯಾನ ವಾಯು ಸಾರವನ್ನು ದೇಹಕ್ಕೆ ತಲುಪಿಸುತ್ತದೆ. ಅಪಾನ ವಾಯು ಕಲ್ಮಷಗಳನ್ನು ಹೊರಹಾಕಿದರೆ, ಉದಾನ ವಾಯು ದೇಹಕ್ಕೆ ಬಲ ಮತ್ತು ಬಣ್ಣ ನೀಡುತ್ತದೆ. ಹೀಗೆ ಪಂಚಪ್ರಾಣಗಳು ದೇಹದೊಳಗೆ ನಿರಂತರವಾಗಿ ಅಡುಗೆಮನೆಯ ಪ್ರಕ್ರಿಯೆಯನ್ನು ನಡೆಸುತ್ತವೆ.

ತೇಗು ಬಂದಾಗ ಊಟ ನಿಲ್ಲಿಸಿ: ಆಹಾರ ಸೇವಿಸುವಾಗ ಹೊಟ್ಟೆ ತುಂಬಿದೆ ಎಂಬುದನ್ನು ನಾಗ ಎಂಬ ಪ್ರಾಣವು ಸೂಚಿಸುತ್ತದೆ. ಊಟದ ಮಧ್ಯೆ ತೇಗು ಬಂದ ತಕ್ಷಣವೇ ಆಹಾರ ಸ್ವೀಕರಿಸುವುದನ್ನು ನಿಲ್ಲಿಸಬೇಕು. ದೇಹ ನೀಡುವ ಈ ಸಹಜ ಸೂಚನೆಯನ್ನು ನಿರ್ಲಕ್ಷಿಸಿದರೆ ಕಾಲಕ್ರಮೇಣ ಆ ಸಹಜ ವ್ಯವಸ್ಥೆಯೇ ಹಾನಿಗೊಳಗಾಗಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂದು ಆಶೀರ್ವಚನ ನೀಡಿದರು.

ಧರ್ಮಸಭೆಯಲ್ಲಿ ಪ್ರಸಿದ್ಧ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

ಹೊನ್ನಾವರ ಹವ್ಯಕ ಮಂಡಲದ ಗೇರುಸೊಪ್ಪ, ಹೊನ್ನಾವರ, ಕಡ್ಲೆ, ಮುಗ್ವಾ ಹಾಗೂ ಹೊಸಾಕುಳಿ ವಲಯಗಳ ಪರವಾಗಿ ಲಕ್ಷ್ಮೀನಾರಾಯಣ ಹೆಗಡೆ ಕುಟುಂಬದವರು ಗುರುಭಿಕ್ಷಾಸೇವೆ ನೆರವೇರಿಸಿದರು. ದಿನಪ್ರಧಾನರಾಗಿ ವಿಶ್ವೇಶ್ವರ ಭಟ್ ಎಲಿಯೂರು ಹಾಗೂ ಪ್ರಮುಖರಾದ ವೇ.ಮೂ. ಸುಬ್ರಹ್ಮಣ್ಯ ಭಟ್ಟ ಅಮ್ಮನವರಮನೆ, ಆರ್.ಜಿ. ಹೆಗಡೆ ಹೊಸಾಕುಳಿ, ಪರಮೇಶ್ವರ ಎನ್. ಭಟ್ಟ, ಕೃಷ್ಣ ಹೆಗಡೆ ಚಿಟ್ಟಾಣಿ, ರೇಷ್ಮಾ ಭಟ್, ದಿನೇಶ ಹೆಗಡೆ, ಮಹೇಶ ಎಮ್.ಎನ್. ಭಾಗವಹಿಸಿದ್ದರು.

About The Author

error: Content is protected !!