

ಗೋಕರ್ಣ: ಹಸಿವು ಹಾಗೂ ಆಹಾರ ಇವೆರಡೇ ಜೀವಿಯ ಎಲ್ಲವನ್ನೂ ನಿರ್ಧರಿಸುತ್ತವೆ. ವೇದ ಪರಂಪರೆಯಲ್ಲಿ ‘ಅಗ್ನಿಸೋಮಾತ್ಮಕಂ ಜಗತ್’ ಎನ್ನಲಾಗಿದ್ದು, ‘ಅಗ್ನಿ’ ಎಂದರೆ ಹಸಿವು ಹಾಗೂ ‘ಸೋಮ’ ಎಂದರೆ ಆಹಾರವಾಗಿದೆ. ಆಹಾರದ ನಿಜವಾದ ಮಹತ್ವ ತಿಳಿಯಲು ಹಸಿವಿನ ಮೂಲವನ್ನು ಮೊದಲು ಅರಿತುಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 18.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ‘ಜಠರಾಗ್ನಿ’ ಕುರಿತು ಶ್ರೀಗಳು ಪ್ರವಚನ ನೀಡಿದರು.

ದೇಹದ ಸ್ವರೂಪ ಹಾಗೂ ಅಗ್ನಿ: ಆಧುನಿಕ ವಿಜ್ಞಾನ ದೇಹವನ್ನು ಆಮ್ಲಜನಕ, ಇಂಗಾಲ ಮತ್ತು ಪರಮಾಣು ಎಂದು ವಿಶ್ಲೇಷಿಸುತ್ತದೆ. ಆದರೆ ಭಾರತೀಯ ದೃಷ್ಟಿಯಲ್ಲಿ ದೇಹವು ಪಂಚಭೂತಗಳ ಸಂಯೋಜನೆಯಾಗಿದೆ (ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ). ಈ ಪಂಚಭೂತಗಳು ದೇಹದೊಳಗೆ ಸಪ್ತ ಧಾತುಗಳಾಗಿ ಪರಿವರ್ತಿತವಾಗಲು ಅಗ್ನಿಯೇ ಮೂಲ ಕಾರಣ.

ಧಾತ್ತ್ವಗ್ನಿಗಳ ಪಾತ್ರ: ದೇಹದಲ್ಲಿ 18 ಪ್ರಮುಖ ಅಗ್ನಿಗಳಿದ್ದು, ರಸ-ರಕ್ತ-ಮಾಂಸ-ಮೇದಸ್ಸು-ಅಸ್ತಿ-ಮಜ್ಜೆ-ಶುಕ್ರ ಎಂಬ ಸಪ್ತ ಧಾತುಗಳಲ್ಲಿಯೂ ಧಾತ್ತ್ವಗ್ನಿಗಳು ಕಾರ್ಯನಿರ್ವಹಿಸುತ್ತವೆ. ಧಾತು ರೂಪಾಂತರದ ವಿಚಾರದಲ್ಲಿ ಪಾರಂಪರಿಕ ಅಭಿಪ್ರಾಯವನ್ನು ಮುಂದೊಂದು ದಿನ ಆಧುನಿಕ ವಿಜ್ಞಾನ ಒಪ್ಪಿಕೊಳ್ಳಲಿದೆ ಎಂದರು.


ವೈವಿಧ್ಯತೆಯೇ ಸೃಷ್ಟಿಯ ಸೌಂದರ್ಯ: ಎಲ್ಲೆಡೆಯೂ ಸಮಾನತೆಯನ್ನು ಹುಡುಕುವುದು ಮೂರ್ಖತನ. ಕೈಗಳು ಇರುವಷ್ಟು ಉದ್ದ ಮೂಗು ಇರಲು ಸಾಧ್ಯವಿಲ್ಲ, ಹಾಗೆಯೇ ದೇಹದಲ್ಲೂ ಎಲ್ಲ ಧಾತುಗಳು ಸಮಾನವಾಗಿರಲು ಸಾಧ್ಯವಿಲ್ಲ. ಸೃಷ್ಟಿಯೆಂಬುದು ವೈವಿಧ್ಯತೆಯಾಗಿದ್ದು, ಏಕತೆಯನ್ನು ಮುಕ್ತಿಯಲ್ಲಷ್ಟೇ ಕಾಣಬಹುದು ಎಂದು ಶ್ರೀಗಳು ತಿಳಿಸಿದರು.
ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಉತ್ತರ ಕನ್ನಡ ಜಿಲ್ಲೆಯ ಪಟ್ಟೇಗಾರ ಸಮಾಜದ ಭಕ್ತಾದಿಗಳಿಂದ ಸ್ವರೂಪಾನಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಪಟ್ಟೇಗಾರ ಸಮಾಜವು ತಲೆತಲಾಂತರದಿಂದ ಶ್ರೀಮಠದ ಗುರುಪರಂಪರೆಯನ್ನು ಆಶ್ರಯಿಸಿ ಬಂದಿದ್ದು, ಶ್ರೀಮಠವು ಸದಾ ಸಮಾಜದ ನೋವು-ನಲಿವುಗಳಲ್ಲಿ ಜೊತೆಯಾಗಿರಲಿದೆ ಎಂದು ಶ್ರೀಗಳು ಆಶೀರ್ವದಿಸಿದರು.
ಸಮಾಜದ ಮುಖಂಡರಾದ ರಮಾನಂದ ದೇವರಾಜ ಶೆಟ್ಟಿ, ಲಂಬೋಧ ಜಯರಾಮ ಶೆಟ್ಟಿ, ದತ್ತಾತ್ರೇಯ ಶ್ರೀಧರ ಶೆಟ್ಟಿ, ಬಂಗಾರೇಶ್ವರ ಮಹಾಬಲೇಶ್ವರ ಶೆಟ್ಟಿ, ಶಂಕರ ಜನಾರ್ಧನ ಶೆಟ್ಟಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಧರ್ಮಸಭೆಯಲ್ಲಿ ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀಧರ ಅಡಿಗ, ಉಡುಪಿಯ ಶಿಕ್ಷಣ ತಜ್ಞ ಎಮ್.ಆರ್. ಹೆಗಡೆ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಹರ್ಷ ಮಾಂಕನಮೂಲೆ ಕುಟುಂಬದವರಿಂದ ಗುರುಭಿಕ್ಷಾ ಸೇವೆ ಜರುಗಿತು. ಜಿ.ವಿ. ಹೆಗಡೆ ಗೋಕರ್ಣ ದಂಪತಿಗಳು ದಿನಪ್ರಧಾನರಾಗಿ ಭಾಗವಹಿಸಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಯೋಗ ದೃಷ್ಟಿಗೆ ಕಾಣುವುದು ಇಂದಿನ ವೈದ್ಯಕೀಯ ಉಪಕರಣಗಳಿಗೆ ಕಾಣಸಿಗುವುದಿಲ್ಲ: ರಾಘವೇಶ್ವರ ಶ್ರೀ