August 21, 2026

ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ

ಗೋಕರ್ಣ: ಸೇವಿಸುವ ಆಹಾರದ ರಸಗಳಿಗೂ ಮನಸ್ಸಿನ ಭಾವಕ್ಕೂ ಗಾಢವಾದ ಸಂಬಂಧವಿದ್ದು, ರಸಗಳ ಸ್ವಭಾವಕ್ಕೆ ಅನುಗುಣವಾಗಿ ಜೀವಿಯ ದೇಹ ಮತ್ತು ಭಾವನೆಗಳಲ್ಲಿ ವ್ಯತ್ಯಾಸಗಳು ಪ್ರತಿಧ್ವನಿಸುತ್ತವೆ. ಸಿಹಿ ರಸವು ಸಂತೋಷವನ್ನು ನೀಡಿದರೆ, ಖಾರ ಕೋಪವನ್ನು, ಕಹಿ ದುಃಖವನ್ನು ಹಾಗೂ ಹುಳಿಯು ಗರ್ವದ ಭಾವನೆಯನ್ನು ಉಂಟುಮಾಡುತ್ತದೆ. ಜನಸಾಮಾನ್ಯರಿಗೆ ಎಲ್ಲ ಭಾವಗಳ ಅವಶ್ಯಕತೆಯಿರುವುದರಿಂದ ಪ್ರತಿನಿತ್ಯ ಷಡ್ರಸಗಳಿಂದ (ಆರು ರಸಗಳು) ಕೂಡಿದ ಆಹಾರವನ್ನೇ ಸೇವಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 20.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ‘ಜಠರಾಗ್ನಿ’ ವಿಷಯವಾಗಿ ಶ್ರೀಗಳು ಪ್ರವಚನ ನೀಡಿದರು.

ಯಾವುದೇ ಯಂತ್ರಗಳಿಲ್ಲದೆ ನಮ್ಮ ಪೂರ್ವಜರು ಹಾಗೂ ಆಯುರ್ವೇದ ಆಚಾರ್ಯರು ದೇಹ ವಿಜ್ಞಾನದ ಬಗ್ಗೆ ಅನುಪಮ ಸಂಶೋಧನೆ ಮಾಡಿದ್ದಾರೆ. ಆಹಾರ ಪಚನವಾಗಲು ಬೇಕಾಗುವ 4 ಗಂಟೆಗಳು ಹಾಗೂ ಅದರ 3 ಹಂತಗಳ ವಿವರಣೆಯನ್ನು ಶಾಸ್ತ್ರಗಳು ನೀಡಿದ್ದರೂ, ಇಂದಿನ ತಲೆಮಾರಿಗೆ ಅದು ‘ಮಂಗನ ಕೈಗೆ ಕೊಟ್ಟ ಮಾಣಿಕ್ಯ’ದಂತಾಗಿ ಅರಿವಿಲ್ಲದಂತಾಗಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ದೇಹದಲ್ಲಿ ಅಗ್ನಿಯು ಉತ್ತುಂಗದಲ್ಲಿದ್ದರೆ ಎಂತಹ ಗಂಭೀರ ವಿಷವನ್ನೂ ಜೀರ್ಣಿಸಿಕೊಳ್ಳಬಹುದು. ಕಾರ್ಕೋಟ ಸಾರಿದ ಮಹಾ ವಿಷವನ್ನೇ ಜೀರ್ಣಿಸಿಕೊಂಡ ನಳ ಮಹಾರಾಜನೇ ಇದಕ್ಕೆ ಸೂಕ್ತ ಉದಾಹರಣೆ.

ಆಹಾರವು ಸಪ್ತ ಧಾತುಗಳಾಗಿ ಪರಿವರ್ತನೆಯಾಗಲು ಊಷ್ಮಾ, ವಾಯು, ಕ್ಲೇದ, ಸ್ನೇಹ, ಕಾಲ ಮತ್ತು ಸಮಯೋಗ ಎಂಬ ಆರು ಅಂಶಗಳು ಕಾರಣ. ಆಹಾರವನ್ನು ಚೆನ್ನಾಗಿ ಅಗಿದು ರಸ ಮಾಡಿ ಸೇವಿಸಬೇಕು ಹಾಗೂ ನೀರನ್ನು ಗುಟುಕು ಗುಟುಕಾಗಿ ಕುಡಿಯಬೇಕು. ಊಟದ ಮಧ್ಯೆ ಅತಿಯಾಗಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಧಕ್ಕೆ ತರುತ್ತದೆ.

    ರಾತ್ರಿ ನಿದ್ದೆಯನ್ನು ಯಾವ ಕಾಲದಲ್ಲಿ ಮಾಡಬೇಕು?:

    “ರಾತ್ರಿಯ ಸುಖಕರ ನಿದ್ದೆಗಾಗಿ ಊಟ ಮಾಡಿದ ಸುಮಾರು ಒಂದೂವರೆ ಗಂಟೆಯ ನಂತರ ನಿದ್ರಿಸಬೇಕು. ರಾತ್ರಿಯ ಸಮಯವನ್ನು ಕಫ, ಪಿತ್ತ ಹಾಗೂ ವಾತ ಕಾಲವೆಂದು ವಿಭಾಗಿಸಲಾಗಿದ್ದು, ‘ಕಫ ಕಾಲ’ದಲ್ಲೇ ನಿದ್ದೆಗೆ ಜಾರಿದರೆ ನಿದ್ದೆಯ ಪೂರ್ಣ ಪ್ರಯೋಜನ ಸಿಗುತ್ತದೆ. ತಡರಾತ್ರಿಯ ‘ಪಿತ್ತ’ ಹಾಗೂ ‘ವಾತ’ ಕಾಲಗಳಲ್ಲಿ ಮಲಗಿದರೆ ನಿದ್ದೆಯ ನಿಜವಾದ ಪ್ರಯೋಜನ ಸಿಗದು.”

    ಹೊನ್ನಾವರ ಹವ್ಯಕ ಮಂಡಲದ ಕರ್ಕಿ, ಅಪ್ಸರಕೊಂಡ, ಭಟ್ಕಳ, ಮರವಂತೆ ಹಾಗೂ ಭವತಾರಿಣೀ ವಲಯಗಳ ಪರವಾಗಿ ಉದಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ನೆರವೇರಿಸಿದರು.

    ದಿನಪ್ರಧಾನರಾಗಿ ರಾಮ ಭಟ್ ರಾಮಕುಂಜ ದಂಪತಿಗಳು ಹಾಗೂ ಪ್ರಮುಖರಾದ ನಾಗರಾಜ ಮತ್ತಿಗಾರ, ರಾಧಾಕೃಷ್ಣ ಭಟ್ ಭಟ್ಕಳ, ಹರಿಪ್ರಸಾದ ಪೆರಿಯಪ್ಪು, ಜಿ.ಎಸ್. ಹೆಗಡೆ, ಸುಧಾಕರ ಬಡಗಣಿ, ಮತ್ತು ವಿಷ್ಣು ಭಟ್ ಕವಲಕ್ಕಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

    About The Author

    error: Content is protected !!