

ಚಿಕ್ಕೋಡಿ: ಬೆಳಗಾವಿಯಲ್ಲಿ ಕನ್ನಡ ಕಡ್ಡಾಯದ ವಿರುದ್ಧ ಜೂನ್ 22 ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಈಎಸ್) ಹಮ್ಮಿಕೊಂಡಿರುವ ಮೋರ್ಚಾಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಚಿಕ್ಕೋಡಿ ತಾಲೂಕು ಘಟಕದ ವತಿಯಿಂದ ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಾಡದ್ರೋಹಿಗಳನ್ನು ಗಡಿಪಾರು ಮಾಡಲು ಒತ್ತಾಯ
ಕಳೆದ ಐದು ದಶಕಗಳಿಂದ ಗಡಿಭಾಗದ ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಮಾಡುತ್ತಾ, ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಕನ್ನಡಿಗರ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿರುವ ಎಂಈಎಸ್ ನಾಯಕರನ್ನು ತಕ್ಷಣವೇ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕೆಂದು ಕರವೇ ಕಾರ್ಯಕರ್ತರು ಈ ಸಂದರ್ಭದಲ್ಲಿ ತೀವ್ರವಾಗಿ ಒತ್ತಾಯಿಸಿದರು.

ಬೆಳಗಾವಿ ಕನ್ನಡದ ಕಿರೀಟ – ಸಂಜು ಬಡಿಗೇರ
“ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಕಿರೀಟ. ಇಲ್ಲಿ ಕನ್ನಡವೇ ಸಾರ್ವಭೌಮ. ಇಲ್ಲಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗೆ ಗೌರವ ಕೊಡುವುದು ಪ್ರತಿಯೊಬ್ಬ ನಿವಾಸಿಯ ಕರ್ತವ್ಯ. ಕನ್ನಡ ಕಡ್ಡಾಯದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಎಂಈಎಸ್ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು ಮತ್ತು ಪ್ರತಿಭಟನೆಗೆ ಅನುಮತಿ ನೀಡಬಾರದು. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು.”
— ಸಂಜು ಬಡಿಗೇರ, ತಾಲೂಕು ಅಧ್ಯಕ್ಷರು, ಕರವೇ ಚಿಕ್ಕೋಡಿ

ಕರವೇಯಿಂದ ‘ಕನ್ನಡವೇ ಸಾರ್ವಭೌಮ’ ಸ್ವಾಭಿಮಾನಿ ರ‍್ಯಾಲಿ ಎಚ್ಚರಿಕೆ
ಇದೇ ವೇಳೆ ಮಾತನಾಡಿದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರು, “ಕರ್ನಾಟಕದ ಸಕಲ ಸೌಲಭ್ಯಗಳನ್ನು ಅನುಭವಿಸುತ್ತಾ ಕನ್ನಡಕ್ಕೆ ದ್ರೋಹ ಬಗೆಯುವ ಎಂಈಎಸ್ ನಾಯಕರ ವರ್ತನೆ ನಾಡದ್ರೋಹಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಒಂದು ವೇಳೆ ಜೂನ್ 22 ರಂದು ಎಂಈಎಸ್ ಪ್ರತಿಭಟನೆಗೆ ಅನುಮತಿ ನೀಡಿದರೆ, ಅದಕ್ಕೆ ಪ್ರತಿಯಾಗಿ ಅಂದೇ ಕರವೇ ವತಿಯಿಂದ ಬೆಳಗಾವಿಯಲ್ಲಿ ‘ಕನ್ನಡವೇ ಸಾರ್ವಭೌಮ’ ಎಂಬ ಬೃಹತ್ ಕನ್ನಡ ಸ್ವಾಭಿಮಾನಿ ರ‍್ಯಾಲಿ ನಡೆಸಲಾಗುವುದು. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಲಿದ್ದು, ಇದರಿಂದಾಗಿ ಉಂಟಾಗುವ ಶಾಂತಿ ಸುವ್ಯವಸ್ಥೆಯ ಧಕ್ಕೆಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.


ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರು
ಈ ಸಂದರ್ಭದಲ್ಲಿ ಕರವೇ ಮುಖಂಡರು ಹಾಗೂ ಕನ್ನಡಾಭಿಮಾನಿಗಳಾದ ಮೋಹನ ಪಾಟೀಲ, ಲಕ್ಷ್ಮಿಕಾಂತ ಖೋತ, ಅಮೂಲ ನಾವಿ, ರಮೇಶ ಡಂಗೇರ, ಅನೀಲ ನಾವಿ, ಚಿದಾನಂದ ಶಿರೋಳೆ, ಶಂಕರ ಅವಡಖಾನ, ಖಾನಪ್ಪ ಬಾಡಕರ, ದುಂಡಪ್ಪ ಚೌಗಲಾ, ಶುಭಂ ಕದಂ, ಸುರೇಶ ಖದ್ದಿ, ರಪಿಕ ಪಠಾಣ, ದುಂಡಪ್ಪ ಬಡಿಗೇರ, ರುದ್ರಯ್ಯ ಹಿರೇಮಠ, ಯಾಸೀನ ಜಮಾದಾರ ಸೇರಿದಂತೆ ಹಲವಾರು ಕನ್ನಡ ಮನಸ್ಸುಗಳು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ, ಚಿಕ್ಕೋಡಿ.
About The Author




More Stories
ಅಥಣಿಯ ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ: ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಶಾಲಾ ಮೇಲ್ದರ್ಜೆಗೆ ಸ್ಥಳೀಯರ ಉಗ್ರ ಆಗ್ರಹ.
ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ
ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ