

ಹೊನ್ನಾವರ: ಬ್ಯಾಂಕ್ನಿಂದ ಹಣ ಪಡೆದು ಹೊರಬರುತ್ತಿದ್ದ ವ್ಯಕ್ತಿಯನ್ನು ಬೆದರಿಸಿ ದರೋಡೆ ಮಾಡಿದ್ದ ಆರೋಪಿಯನ್ನು ಘಟನೆ ನಡೆದ ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಹೊನ್ನಾವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಕಿ ನಿವಾಸಿ ನಾಗರಾಜ ಶಂಕರ ನಾಯ್ಕ್ ಬಂಧಿತ ಆರೋಪಿ.

ಘಟನೆಯ ವಿವರ: ವಂದೂರು ಗ್ರಾಮದ ದುಗ್ಗುರು ನಿವಾಸಿ ಶಂಕರ ವಿಠೋಬ ನಾಯ್ಕ್ ಅವರು ಶನಿವಾರ ಮಧ್ಯಾಹ್ನ ಹೊನ್ನಾವರ ಪಟ್ಟಣದ ಅರ್ಬನ್ ಬ್ಯಾಂಕ್ನಲ್ಲಿ ಬಂಗಾರದ ಚೈನ್ ಅಡವಿಟ್ಟು 1.50 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಅದರಲ್ಲಿ ₹3,500 ನಗದನ್ನು ತಮ್ಮ ಶರ್ಟ್ ಜೇಬಿನಲ್ಲಿಟ್ಟು, ಉಳಿದ ಹಣವನ್ನು ಕವರ್ನಲ್ಲಿಟ್ಟುಕೊಂಡು ಬ್ಯಾಂಕ್ನಿಂದ ಹೊರಬರುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಆರೋಪಿ ನಾಗರಾಜ, ಶಂಕರ ನಾಯ್ಕ್ ಅವರನ್ನು ಬಲವಂತವಾಗಿ ಕರೆದೊಯ್ದು, “ಹಣ ನೀಡದಿದ್ದರೆ ಬೈಕ್ನಿಂದ ತಳ್ಳಿ ಕೊಲೆ ಮಾಡುತ್ತೇನೆ” ಎಂದು ಜೀವಬೆದರಿಕೆ ಹಾಕಿ, ಜೇಬಿನಲ್ಲಿದ್ದ ₹3,500 ನಗದನ್ನು ಕಸಿದುಕೊಂಡು ಪರಾರಿಯಾಗಿದ್ದ.


ಈ ಸಂಬಂಧ ಸಂತ್ರಸ್ತ ಶಂಕರ ನಾಯ್ಕ್ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಟ್ಟಣದ ಜನತೆಯನ್ನು ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಸಾರ್ವಜನಿಕ ವಲಯದಿಂದ ತೀವ್ರ ಆಗ್ರಹ ಕೇಳಿಬಂದಿತ್ತು.

ಸಿಸಿಟಿವಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ: ದೂರು ದಾಖಲಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಹೊನ್ನಾವರ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಚಲನವಲನ ಹಾಗೂ ವಿವಿಧ ತಾಂತ್ರಿಕ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಕಳವು ಮಾಡಿದ್ದ ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ದರೋಡೆ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿದ ಹೊನ್ನಾವರ ಪೊಲೀಸ್ ತಂಡದ ಕ್ಷಿಪ್ರ ಕಾರ್ಯಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.