August 23, 2026

ನುಡಿಗಿಂತ ನಡೆ ಎರಡು ಪಟ್ಟು ಮುಂದಿರಬೇಕು: ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಮಠ–ಮಂದಿರಗಳಲ್ಲಿ ಪೂಜೆಯ ಜೊತೆಗೆ ಪುಸ್ತಕ ಸಂಸ್ಕೃತಿ ಬೆಳೆಯಲಿ

ಶಿರಸಿಯ ಮುಂಡಗೇಸರದಲ್ಲಿ ‘ಗೀತ–ನೃತ್ಯ ಸಂಗಮ’ ಸಾಂಸ್ಕೃತಿಕ ವೈಭವ

    ಶಿರಸಿ: “ಮನುಷ್ಯನ ಮಾತಿಗಿಂತ ಆತನ ನಡೆ ಮುಖ್ಯ. ದೇವರು ನಮಗೆ ಒಂದು ನಾಲಗೆ ಹಾಗೂ ಎರಡು ಕಾಲುಗಳನ್ನು ಕೊಟ್ಟಿದ್ದಾನೆ. ಅಂದರೆ ಒಂದು ಮಾತು ಆಡಿದರೆ ಅದನ್ನು ಕಾರ್ಯರೂಪಕ್ಕೆ ತರಲು ಎರಡು ಹೆಜ್ಜೆ ಮುಂದೆ ಇಡಬೇಕು. ಸಮಾಜದಲ್ಲಿ ಮಾತು ಕಡಿಮೆಯಾಗಿ, ಕಾಯಕ ಹೆಚ್ಚಾಗುವ ಜೀವನಶೈಲಿ ಬೆಳೆಯಬೇಕು,” ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

    ತಾಲೂಕಿನ ಮುಂಡಗೇಸರದ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಗೀತ–ನೃತ್ಯ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಮಾನವೀಯತೆಯೇ ವಿಶ್ವಗುರುತ್ವದ ಹಾದಿ: “ಇಂದು ಸಮಾಜದಲ್ಲಿ ‘ನಮ್ಮದೇ ಸರಿ, ನಮ್ಮದೇ ಕೇಳಬೇಕು’ ಎಂಬ ಹಠದಿಂದಾಗಿ ಮಾನವೀಯತೆ ಕಣ್ಮರೆಯಾಗುತ್ತಿದ್ದು, ಕುಟುಂಬಗಳಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಭಾರತ ವಿಶ್ವಗುರುವಾಗಲು ಕೇವಲ ತತ್ವ-ಸಿದ್ಧಾಂತಗಳು ಸಾಲದು, ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು. ಪರಸ್ಪರರ ಮಾತುಗಳನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ಮೂಡಬೇಕು,” ಎಂದರು.

    ಮಠ-ಮಂದಿರಗಳಲ್ಲಿ ಗ್ರಂಥಾಲಯವಿರಲಿ: “ಮಠ-ಮಂದಿರಗಳು ಕೇವಲ ಪೂಜೆ, ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಬಾರದು. ಅಲ್ಲಿ ಉತ್ತಮ ಜ್ಞಾನವರ್ಧಕ ಪುಸ್ತಕಗಳನ್ನಿಟ್ಟು ಓದುವ ಸಂಸ್ಕೃತಿ ಬೆಳೆಸಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕಾದರೆ ಮೊದಲು ಪಾಲಕರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ದೇಶದ ಸಂಸ್ಕೃತಿಯನ್ನು ಮಕ್ಕಳಿಗೆ ಕಳಿಸಬೇಕೇ ಹೊರತು ವಿದೇಶಿ ಸಂಸ್ಕೃತಿಯನ್ನಲ್ಲ. ಸಮಾಜದಲ್ಲಿ ಶಾಂತಿ ನೆಲೆಸಲು ವೈವಿಧ್ಯತೆಯ ನಡುವೆ ಏಕತೆ ಮುಖ್ಯ,” ಎಂದು ಶ್ರೀಗಳು ಆಶಿಸಿದರು. ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಶ್ರೀಗಳು ₹10,000 ಕೊಡುಗೆ ನೀಡಿದರು.

    ಪುಸ್ತಕಗಳಿಗಿಂತ ಹೆಂಡದ ಅಂಗಡಿ ಹೆಚ್ಚುತ್ತಿರುವುದು ಕಳವಳಕಾರಿ: ಮಣಿಪಾಲದ ಬಿವಿಟಿ ಕಾರ್ಯನಿರ್ವಾಹಕ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಮಾತನಾಡಿ, “ಸಮಾಜದಲ್ಲಿ ಪುಸ್ತಕದ ಅಂಗಡಿಗಳಿಗಿಂತ ಹೆಂಡದ ಅಂಗಡಿಗಳು ಹೆಚ್ಚಾಗುತ್ತಿರುವುದು ಚಿಂತಾಜನಕ. ಪ್ರಕೃತಿಯ ಬಣ್ಣ ಮತ್ತು ಪ್ರಾಣಿ-ಪಕ್ಷಿಗಳಿಂದ ಬಂದ ಸಪ್ತಸ್ವರಗಳನ್ನು ಹಾಗೂ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ,” ಎಂದರು.

    ಸನ್ಮಾನ ಸ್ವೀಕರಿಸಿದ ಚಿಂತಕ ವೈಶಾಲಿ ವಿ.ಪಿ. ಹೆಗಡೆ ಮಾತನಾಡಿ, “ಇಂದು ಸಮಾಜವನ್ನು ಶ್ರೇಷ್ಠತೆಯ ವ್ಯಸನ ಕಾಡುತ್ತಿದ್ದು, ನೆಮ್ಮದಿ ಕಸಿದುಕೊಳ್ಳುತ್ತಿದೆ,” ಎಂದರು. ಟ್ರಸ್ಟ್‌ನ ಉಪಾಧ್ಯಕ್ಷ ರಮೇಶ ಹೆಗಡೆ ಹಳೆಕಾನಗೋಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೈನ್ ಮ್ಯಾನ್ ಸಂಗಪ್ಪ ಮಡ್ಡಿಕರ್ ಅವರನ್ನು ಗೌರವಿಸಲಾಯಿತು.

    ವೇದಿಕೆಯಲ್ಲಿ ವಿನಾಯಕ ರಾ. ಹೆಗಡೆ, ರಾಜೀವ ಹೆಗಡೆ, ವಿನಾಯಕ ಹೆಗಡೆ, ವೆಂಕಟೇಶ ಹೆಗಡೆ, ನರೇಂದ್ರ ಹೆಗಡೆ ಉಪಸ್ಥಿತರಿದ್ದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಗಾಯತ್ರಿ ರಾಘವೇಂದ್ರ ವಂದಿಸಿದರು. ಕಿರಣ್ ಭಟ್ಟ ಭೈರುಂಬೆ ಕಾರ್ಯಕ್ರಮ ನಿರೂಪಿಸಿದರು.

    ಸಂಗೀತ–ನೃತ್ಯ–ಯಕ್ಷ ರೂಪಕದ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ವಿ. ರಾಧಾ ದೇಸಾಯಿ ಹಾಗೂ ಪ್ರಸನ್ನ ವೈದ್ಯ ಹೆಗ್ಗಾರ ಅವರ ಮಧುರ ಗಾಯನ ಸಭಿಕರನ್ನು ಮನಸೂರೆಗೊಳಿಸಿತು. ವಿಜಯೇಂದ್ರ ಹೆಗಡೆ (ತಬಲಾ), ವಿ. ಪ್ರಕಾಶ ಹೆಗಡೆ (ಹಾರ್ಮೋನಿಯಂ) ಸಾಥ್ ನೀಡಿದರು.

    ಯುವ ಕಲಾವಿದೆ ಸಂಪದ ಹೆಗಡೆ ಅವರ ಭರತನಾಟ್ಯ ಹಾಗೂ ಗೋಕುಲ-ವೃಂದಾವನದ ಕಥಾನಕನ್ನಾಧರಿಸಿದ ‘ವಿಶ್ವಾಭಿಗಮನಮ್’ ಯಕ್ಷ ರೂಪಕವನ್ನು ತುಳಸಿ ಹೆಗಡೆ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಹಾಗೂ ವಿಘ್ನೇಶ್ವರ ಗೌಡ ಸಹಕರಿಸಿದರು.

    About The Author

    error: Content is protected !!