

ರೂ. 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ: ಅಭಿವೃದ್ಧಿಯತ್ತ ಸುಕ್ಷೇತ್ರ

35 ಅಡಿ ಎತ್ತರದ ಪಂಚಮುಖಿ ಆಂಜನೇಯ, ಗಣಪತಿ ವಿಗ್ರಹ ಹಾಗೂ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ

ಕೃಷ್ಣರಾಜಪೇಟೆ (ಮಂಡ್ಯ): ತಾಲೂಕಿನ ಬೂಕನಕೆರೆ ಹೋಬಳಿಯ ಪ್ರಸಿದ್ಧ ಪುರಾಣಪ್ರಸಿದ್ಧ ಸುಕ್ಷೇತ್ರ ಬೆಟ್ಟದ ಹೊಸೂರಿನ ಶ್ರೀ ಉದ್ಭವ ಬೋಳಾರೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಸೆಪ್ಟೆಂಬರ್ 5ರ ಕೊನೆಯ ಶ್ರಾವಣ ಶನಿವಾರ (ಬೆಳಿಗ್ಗೆ 10:30 ರಿಂದ 11:30 ರೊಳಗೆ) ಶ್ರೀ ಸ್ವಾಮಿಯ 11ನೇ ವರ್ಷದ ಬ್ರಹ್ಮರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಬೂಕನಕೆರೆ ಭೇಟಿ ವೆಂಕಟೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಕ್ಷೇತ್ರದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಇದರೊಂದಿಗೆ 35 ಅಡಿ ಎತ್ತರದ ಪಂಚಮುಖಿ ಆಂಜನೇಯನ ವಿಗ್ರಹ, ಶ್ರೀ ಮಹಾಗಣಪತಿ ವಿಗ್ರಹ, ದಸರಾ ಮಂಟಪ, ಗುಹೆ, ಕಲ್ಯಾಣಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ನಾಡಿನ ಭಕ್ತರು ಉದಾರವಾಗಿ ದೇಣಿಗೆ ನೀಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಬೇಕು,” ಎಂದು ಮನವಿ ಮಾಡಿದರು.


ಪ್ರಧಾನ ಅರ್ಚಕರಾದ ಸಿ.ಪಿ. ಸುಂದರ್ ದೇಶ್ ಹಾಗೂ ಬಿ.ಎಸ್. ಮನೋಹರ ಆಚಾರ್ಯ ಮಾತನಾಡಿ, 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಈ ಸುಕ್ಷೇತ್ರಕ್ಕೆ ನಾಡಿನಾದ್ಯಂತ ಭಕ್ತರ ಹರಿವು ಹೆಚ್ಚುತ್ತಿದೆ ಎಂದರು.
ಶ್ರಾವಣ ಮಾಸದ ಅನ್ನಸಂತರ್ಪಣೆ ಮತ್ತು ಪ್ರಸಾದ ಸೇವೆ:
ಟ್ರಸ್ಟ್ ಕಾರ್ಯದರ್ಶಿ ಮಡುವಿನಕೋಡಿ ಸುದರ್ಶನ್ ಮಾಹಿತಿ ನೀಡಿ, ಶ್ರಾವಣದ ಪ್ರತಿ ಶನಿವಾರ ವಿವಿಧ ಗ್ರಾಮಸ್ಥರಿಂದ ಪ್ರಸಾದ ಸೇವೆ ಜರುಗಲಿದೆ ಎಂದರು:
1ನೇ ಶನಿವಾರ: ಬೂಕನಕೆರೆ ಪುಟ್ಟಮ್ಮನವರ ಕುಟುಂಬ ವರ್ಗ ಹಾಗೂ ಅಟ್ಟುಪ್ಪೆ ಗ್ರಾಮಸ್ಥರಿಂದ.
2ನೇ ಶನಿವಾರ: ಮಡುವಿನ ಕೋಡಿ ಹಾಗೂ ಮತ್ತಿಕೆರೆ ಗ್ರಾಮಸ್ಥರಿಂದ.
3ನೇ ಶನಿವಾರ: ಲಕ್ಷ್ಮಿಸಾಗರ ಮತ್ತು ನೀಲನಹಳ್ಳಿ ಗ್ರಾಮಸ್ಥರಿಂದ.
4ನೇ ಶನಿವಾರ (ರಥೋತ್ಸವದ ದಿನ): ಬೆಟ್ಟದ ಹೊಸೂರು, ದೊಡ್ಡ ಗಾಡಿಗನಹಳ್ಳಿ, ಐಚನಹಳ್ಳಿ, ಬೂಕನಕೆರೆ ಹಾಗೂ ಹೊಡಕೆ ಶೆಟ್ಟಹಳ್ಳಿ ಗ್ರಾಮಸ್ಥರ ನೇತೃತ್ವದಲ್ಲಿ ಬೃಹತ್ ಪ್ರಸಾದ ವಿನಿಯೋಗ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಐಚನಹಳ್ಳಿ ಬಿ. ಪುಟ್ಟಸ್ವಾಮಿ, ಉಪಾಧ್ಯಕ್ಷ ಬೆಟ್ಟದ ಹೊಸೂರು ಬೆಟ್ಟೇಗೌಡ, ಲಕ್ಷ್ಮೀಸಾಗರ ರಂಗಸ್ವಾಮಿ, ದೊಡ್ಡಗಾಡಿಗನಹಳ್ಳಿ ವೆಂಕಟರಮಣೇಗೌಡ, ನಾಡನಪ್ಪನಹಳ್ಳಿಯ ಜವರೇಗೌಡ, ನೀಲನಹಳ್ಳಿಯ ದೇವರಾಜು, ಅಟ್ಟುಪ್ಪೆ ಮಹೇಶ್, ಮೈಸೂರಿನ ರಾಮಕೃಷ್ಣ ಸ್ವಾಮಿ, ಡಾ. ರಂಗಸ್ವಾಮಿ ಪಾಪಯ್ಯ, ಬೂಕನಕೆರೆ ಬಿ.ಟಿ. ಕೃಷ್ಣೇಗೌಡ ಸೇರಿದಂತೆ ಟ್ರಸ್ಟ್ನ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ (ಮಂಡ್ಯ)
About The Author




More Stories
ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 74 ಲಕ್ಷ ರೂ. ಲಾಭ: ಅಧ್ಯಕ್ಷ ಕೆ.ವೈ. ಹರೀಶ್ ಮಾಹಿತಿ.
ಮಂದಗೆರೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುಟಾಣಿ ಮಕ್ಕಳಿಗೆ ನಟ ಮಧು ಮಂದಗೆರೆಯಿಂದ ಸಿಹಿ ವಿತರಣೆ.
ಸಿದ್ದರಾಮಯ್ಯ ಶೋಷಿತ ವರ್ಗಗಳ ಉಸಿರು, ಸಾಮಾಜಿಕ ನ್ಯಾಯದ ಹರಿಕಾರ: ಕೆ.ಆರ್.ಪೇಟೆಯಲ್ಲಿ ಬಿ. ನಾಗೇಂದ್ರಕುಮಾರ್ ಬಣ್ಣನೆ