November 23, 2026

‘ಕರುನಾಡ ವೈಭವ-2026’ ವೇದಿಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಅದ್ದೂರಿ ಗೌರವ ಸನ್ಮಾನ

‘ಮೊದಲು ಚಿಕಿತ್ಸೆ, ನಂತರ ಹಣ’ ತತ್ವದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ನಿಸ್ಸ್ವಾರ್ಥ ಸೇವೆಗೆ ಕತಾರ್ ಕನ್ನಡಿಗರ ಗೌರವ ಸಮರ್ಪಣೆ

ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ (KSQ) ವತಿಯಿಂದ ಆಯೋಜಿಸಲಾಗಿದ್ದ ‘ಕರುನಾಡ ವೈಭವ-2026’ ಸಾಂಸ್ಕೃತಿಕ ಸಮ್ಮೇಳನದಲ್ಲಿ, ಪ್ರಸಿದ್ಧ ಹೃದ್ರೋಗ ತಜ್ಞರು, ಸಂಸದರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಸಿ.ಎನ್. ಮಂಜುನಾಥ್ ಮತ್ತು ಅವರ ಧರ್ಮಪತ್ನಿ ಅನಸೂಯಾ ಮಂಜುನಾಥ್ ಅವರಿಗೆ ಕತಾರ್ ಕನ್ನಡಿಗರ ಪರವಾಗಿ ಅತ್ಯಂತ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಲಾಯಿತು.

ಅಲ್ ವಕ್ರಾ ನಗರದ ಡಿಪಿಎಸ್-ಎಂಐಎಸ್ (DPS-MIS) ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಸಾಂಸ್ಕೃತಿಕ ಸಚಿವಾಲಯದ ಸಂಗೀತ ವ್ಯವಹಾರಗಳ ಕೇಂದ್ರದ ನಿರ್ದೇಶಕ ಖಾಲಿದ್ ಅಲ್ ಸಾಲೆಮ್ ಹಾಗೂ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಾನವೀಯ ವೈದ್ಯಕೀಯ ಸೇವೆಗೆ ಶ್ಲಾಘನೆ: ಈ ಸಂದರ್ಭದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರ ದಶಕಗಳ ನಿಸ್ಸ್ವಾರ್ಥ ವೈದ್ಯಕೀಯ ಸೇವೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ‘ಮೊದಲು ಚಿಕಿತ್ಸೆ, ನಂತರ ಹಣ’ ಎಂಬ ಮಾನವೀಯ ತತ್ವದಡಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅತ್ಯುನ್ನತ ಚಿಕಿತ್ಸೆ ದೊರೆಯುವಂತೆ ಮಾಡಿದ ಅವರ ಸೇವೆಯನ್ನು ಸಂಘವು ಕೊಂಡಾಡಿತು.

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್ ಅವರು, ಸಂಸತ್ತಿನಲ್ಲಿ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆ ತರಲು ಮತ್ತು ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯಗಳು ತಲುಪುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಅಭಿನಂದಿಸಲಾಯಿತು.

ತಮ್ಮ ಸರಳತೆ, ಕಾರುಣ್ಯ ಹಾಗೂ ಸೇವಾ ಮನೋಭಾವದ ಮೂಲಕ ಕರ್ನಾಟಕ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸಿರುವ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಕತಾರ್‌ನ ಸಮಸ್ತ ಕನ್ನಡಿಗರು ಗೌರವ ಸಮರ್ಪಿಸಿದರು.

About The Author

error: Content is protected !!