ಅಥಣಿ: ತಾಲೂಕಿನ ಸರ್ಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ತಕ್ಷಣವೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಹಾಗೂ ಶಿವಯೋಗಿ ನಗರದ ಮೋಟಗಿ ತೋಟ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿಗಳನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ ಅವರಿಗೆ ಗುರುವಾರ ಮಹತ್ವದ ಮನವಿ ಸಲ್ಲಿಸಲಾಯಿತು.


ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ. ಎಚ್. ಜಮಾದಾರ ಅವರ ಆದೇಶದ ಮೇರೆಗೆ, ನಮ್ಮ ನಡೆ ಸರ್ಕಾರಿ ಶಾಲೆ ಕಡೆ ಎಂಬ ವಿಶೇಷ ಅಭಿಯಾನದ ಅಡಿಯಲ್ಲಿ ಈ ಮನವಿಯನ್ನು ಸಲ್ಲಿಸಿ ತಾಲೂಕಿನ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಯಿಸಲಾಯಿತು.
ಟ್ರಾಫಿಕ್ ಸಮಸ್ಯೆ: ಮಕ್ಕಳ ಜೀವಕ್ಕೆ ಭೀತಿ ಎಂದ ಪ್ರವೀಣ ನಾಯಿಕ
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಪ್ರಗತಿಯ ಅಗತ್ಯತೆಯನ್ನು ವಿವರಿಸಿದರು: “ಅಥಣಿ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಶಿವಯೋಗಿ ನಗರದ ಮೋಟಗಿ ತೋಟ ಶಾಲೆಯ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಸುಮಾರು ಎರಡು ಕಿಲೋಮೀಟರ್ ದೂರದ ಪ್ರೌಢಶಾಲೆಗಳಿಗೆ ಹೋಗಬೇಕಾಗಿದ್ದು, ರಸ್ತೆ ದಾಟುವಾಗ ಪೋಷಕರು ಹಾಗೂ ಮಕ್ಕಳು ಜೀವದ ಭೀತಿ ಎದುರಿಸುವಂತಾಗಿದೆ. ಹೀಗಾಗಿ ಮೋಟಗಿ ತೋಟ ಶಾಲೆಯಲ್ಲೇ ೯ ಮತ್ತು ೧೦ನೇ ತರಗತಿಗಳನ್ನು ಆರಂಭಿಸುವುದು ಅತ್ಯಗತ್ಯವಾಗಿದೆ.” ಎಮದು ಮಾತನಾಡಿದ ಅವರು, “ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ಸಿಕ್ಕರೆ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಖಾಸಗಿ ಶಾಲೆಗಳ ಕಡೆ ಮುಖ ಮಾಡುವುದು ತಪ್ಪುತ್ತದೆ. ನುರಿತ ಅತಿಥಿ ಶಿಕ್ಷಕರನ್ನು ನಿಯೋಜಿಸುವುದರಿಂದ ಗ್ರಾಮೀಣ ಭಾಗದ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ” ಎಂದು ಒತ್ತಾಯಿಸಿದರು.

ಬೆಂಗಳೂರಿಗೆ ಪ್ರಸ್ತಾವನೆ ಸಲ್ಲಿಕೆ: ಬಿಇಒ ಭರವಸೆ
ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ ಅವರು ಮಾತನಾಡಿ, “ಶಿವಯೋಗಿ ನಗರದ ಮೋಟಗಿ ತೋಟ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತು ಈಗಾಗಲೇ ಇಲಾಖೆಯ ವತಿಯಿಂದ ಬೆಂಗಳೂರಿನ ಉನ್ನತ ಕಚೇರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಇದಕ್ಕೆ ಸರ್ಕಾರದ ಅನುಮೋದನೆ ಸಿಗಲಿದೆ. ಇನ್ನು ತಾಲೂಕಿನ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಶೀಘ್ರದಲ್ಲೇ ಸಭೆ ಕರೆದು, ನಿಯಮಾನುಸಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಮುಖಂಡರುಗಳಾದ ಶರಣಪ್ಪ ಶಿಂಧೆ, ಅನಿಲ ಭಾಮನೆ, ಶಿವಾನಂದ ನಾವಿ, ಎಂ. ಶರ್ಮಾ, ಕವಿತಾ ಬೋಸಲೆ, ಸರಸ್ವತಿ ನ್ಯಾಮಗೌಡ, ಅಮೂಲ ಚವಾಣ, ಕಿರಣ ಪಾಟೋಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ

More Stories
ಕಣ್ಣೆದುರೇ ಕಾಡುತ್ತಿದೆ ಸಾವಿನ ದಾರಿ: ಅಥಣಿ ಮಾರುಕಟ್ಟೆಯಲ್ಲಿ ಮುರಿದು ಬಿದ್ದ ಕಂಬದ ಕೆಳಗೆ ಜವರಾಯನ ಜೊತೆ ವ್ಯಾಪಾರ!
ವಿಶೇಷ ಚೇತನ ಮಕ್ಕಳ ಶಾಲೆ ಬಳಿ ನೂತನ ಬಸ್ ನಿಲುಗಡೆಗೆ ಅಧಿಕೃತ ಚಾಲನೆ
ಶಿವಯೋಗಿ ನಗರದಲ್ಲಿ ಕಣ್ಣು ಮುಚ್ಚಿ ಕುಳಿತ ಹೆಸ್ಕಾಂ; ಲೈವ್ ವೈರ್ ಕಟ್ ಆಗಿದ್ದರೂ ಕರಗದ ಅಧಿಕಾರಿಗಳ ನಿರ್ಲಕ್ಷ್ಯ