

ಕಾಗವಾಡ (ಬೆಳಗಾವಿ): “ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳು ಕೇವಲ ಮತಬ್ಯಾಂಕ್‌ಗೆ ಸೀಮಿತವಾಗಿವೆ. ಗೆದ್ದ ಮೇಲೆ ಜನಪ್ರತಿನಿಧಿಗಳು ಈ ಕಡೆ ತಿರುಗಿಯೂ ನೋಡುತ್ತಿಲ್ಲ. ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ” ಎಂದು ಕಾಗವಾಡ ತಾಲೂಕಿನ ಪಾಂಡೆಗಾಂವ ಮತ್ತು ಕಂಗೋಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಂಡೆಗಾಂವದಿಂದ ಕಂಗೋಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರಂತರ ಭಾರೀ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದ್ದು, ಇಡೀ ರಸ್ತೆ ಕೆಸರಿನ ಹೊಂಡವಾಗಿ ಮಾರ್ಪಟ್ಟಿದೆ.

ಸಾರ್ವಜನಿಕರ ಪರದಾಟ ಹಾಗೂ ನರಕಯಾತನೆ:

ಅಪಘಾತಗಳ ಸರಣಿ: ಸಣ್ಣ ಮಳೆಯಾದರೂ ಇಡೀ ರಸ್ತೆ ಕೆಸರುಮಯವಾಗುತ್ತಿದ್ದು, ದಿನನಿತ್ಯ ಹಲವಾರು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.


ವಿದ್ಯಾರ್ಥಿಗಳು, ವೃದ್ಧರ ಗೋಳು: ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕುಡಿಯುವ ನೀರು ತರಲು ವಯೋವೃದ್ಧರು ಪ್ರತಿದಿನ ಹರಸಾಹಸ ಪಡುವಂತಾಗಿದೆ.
ಪ್ರಾಣಾಪಾಯದ ಭೀತಿ: ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅಗ್ನಿಪರೀಕ್ಷೆಯಾಗಿದ್ದು, ಜೀವ ಭಯದಲ್ಲೇ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲ್ಲ ಹಂತದಲ್ಲೂ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಆಡಳಿತ!
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಶೀಲ್ದಾರ್, ಶಾಸಕರು, ಚಿಕ್ಕೋಡಿ ಲೋಕಸಭಾ ಸಂಸದರು, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಲೋಕೋಪಯೋಗಿ (PWD) ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೂ ಅಂಚೆ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಿರುವುದು ಗ್ರಾಮಸ್ಥರ ಸಹನೆಯ ಗಡಿ ದಾಟಿಸಿದೆ ಎಂದು ರೈತ ಮುಖಂಡ ಸುರೇಶ್ ಹಾಗೂ ಸ್ಥಳೀಯರು ದೂರಿದ್ದಾರೆ.
ಆಡಳಿತ ವ್ಯವಸ್ಥೆಗೆ ಗ್ರಾಮಸ್ಥರ ನೆರವರೆಯ ಪ್ರಶ್ನೆ:
“ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸರ್ಕಾರ, ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿಗಳವರೆಗೆ ಎಲ್ಲರಿಗೂ ಪರಿಸ್ಥಿತಿ ತಲುಪಿದೆ. ಇಷ್ಟಾದರೂ ಈ ರಸ್ತೆಯನ್ನು ಸುಧಾರಣೆ ಮಾಡುತ್ತಾರೋ ಅಥವಾ ಹೀಗೆಯೇ ನರಕಯಾತನೆಯಲ್ಲಿ ಮುಂದುವರಿಸುತ್ತಾರೋ?” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆಗೆ ಜಲ್ಲಿ ಹಾಕಿ ತಾತ್ಕಾಲಿಕ ರಿಪೇರಿ ಮಾಡಬೇಕು ಹಾಗೂ ಶೀಘ್ರದಲ್ಲಿ ಶಾಶ್ವತ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಪಾಂಡೆಗಾಂವ-ಕಂಗೋಳಿ ರಸ್ತೆ ತಡೆದು, ತಹಶೀಲ್ದಾರ್ ಹಾಗೂ PWD ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಸ್ವರೂಪದ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರೈತರು ಸಚಿನ್ ಪಾಟೀಲ, ರಾಜಾರಾಮ ಆಠವಳೆ, ಧನಾಜಿ ಜಾಧವ್ ಹಾಗೂ ರೈತರಾದ ಸುಭಾಷ್, ಸುರೇಶ್ ಪಾಟೀಲ, ಸಂದೀಪ್ ಪಾಟೀಲ, ಅಜಿತ್ ಪಾಟೀಲ, ರಾಜು, ಬಾಳು, ಸದಾ, ತಾನಾಜಿ, ಸಾಗರ್, ಶ್ರೀಮಂತ, ವಿಶ್ವನಾಥ್, ಸುಶೀಲ, ಸಂಗೀತಾ, ರೂಪಾಲಿ, ಕಮಲ, ಶೋಭಾ ಕಾಗಳೆ ಸೇರಿದಂತೆ ಪಾಟೀಲ್ ಬಂಧುಗಳು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಮಹೇಶ್ ಶರ್ಮಾ
About The Author




More Stories
ಕೂಡ್ಲಿಗಿಯಲ್ಲಿ ಒಣಗಿದ ಬೆಳೆ ವೀಕ್ಷಿಸಿದ ಸಚಿವ ಜಮೀರ್: ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಭರವಸೆ
ಅಥಣಿ ಬೆನ್ನೇಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಟ: ಶಾಸಕ ಲಕ್ಷ್ಮಣ್ ಸವದಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಮನವಿ
ಅಪಾಯಕಾರಿ ಚರಂಡಿ ಮುಚ್ಚಳಿಕೆ ಸರಿಪಡಿಸಲು ಆಗ್ರಹ — ಪುರಸಭೆ ಹಾಗೂ ತಹಶೀಲ್ದಾರರಿಗೆ ಮತ್ತೆ ಮನವಿ