August 23, 2026

ನದಿ ಉಳಿದರೆ ಬದುಕು ಉಳಿವು: ಶರಾವತಿ ಉಳಿವಿಗಾಗಿ ಬಂಗಾರಮಕ್ಕಿಯಲ್ಲಿ ‘ನದಿ ಮತ್ತು ನೀರು’ ವಿಚಾರ ಸಂಕಿರಣ!

ಪಶ್ಚಿಮ ಘಟ್ಟದ ಜೀವವೈವಿಧ್ಯ ನಾಶಪಡಿಸುವ ಯೋಜನೆಗಳು ದುರಂತ: ಶ್ರೀ ಮಾರುತಿ ಗುರೂಜಿ

ಪರಿಸರ ಚಿಂತಕ ಶಿವಾನಂದ ಕಳವೆ ಹಾಗೂ ಡಾ. ಗಿರೀಶ ಜನ್ನೆ ಅವರಿಂದ ವಿಶೇಷ ಚಿಂತನ-ಮಂಥನ

    ಬಂಗಾರಮಕ್ಕಿ : “ಸಂವಿಧಾನದತ್ತವಾಗಿ ನಮಗೆ ಬದುಕುವ ಹಕ್ಕು ಹೇಗಿದೆಯೋ, ನಮ್ಮ ಸುತ್ತಮುತ್ತಲಿನ ಜೀವವೈವಿಧ್ಯಕ್ಕೂ ಬದುಕುವ ಹಕ್ಕಿದೆ. ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ಅದೆಷ್ಟೋ ಜೀವಸಂತತಿಯ ಸರ್ವನಾಶಕ್ಕೆ ಕಾರಣವಾಗಬಲ್ಲ ಯೋಜನೆಗಳು ತಲೆಯೆತ್ತುತ್ತಿರುವುದು ದೊಡ್ಡ ದುರಂತ,” ಎಂದು ಬಂಗಾರಮಕ್ಕಿಯ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಆತಂಕ ವ್ಯಕ್ತಪಡಿಸಿದರು.

    ಪಶ್ಚಿಮ ಘಟ್ಟದ ಸಂರಕ್ಷಣೆಯ ಮಹಾಸಂಕಲ್ಪದೊಂದಿಗೆ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, ಅದರ ಭಾಗವಾಗಿ ಆಯೋಜಿಸುತ್ತಿರುವ ಭಾನುವಾರದ ವಿಚಾರ ಸಂಕಿರಣಗಳ ಸರಣಿಯಲ್ಲಿ ‘ನದಿ ಮತ್ತು ನೀರು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ’ ಎಂಬ ವಿಷಯದ ಕುರಿತು ಆಶೀರ್ವಚನ ನೀಡುತ್ತಿದ್ದರು.

    ನೀರಿದ್ದರೆ ಮಾತ್ರ ಮಾನವಕುಲ ಹಾಗೂ ವನ್ಯಜೀವಿಗಳ ಉಳಿವು:

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪಿಪಿಟಿ (PPT) ದೃಶ್ಯಾವಳಿಗಳ ಮೂಲಕ ವಿವರಣೆ ನೀಡಿದ ಉತ್ತರ ಕನ್ನಡ ಜಿಲ್ಲೆಯ ಜಲಸಂರಕ್ಷಣಾಧಿಕಾರಿ ಹಾಗೂ ಪರಿಸರ ಚಿಂತಕ ಶ್ರೀ ಶಿವಾನಂದ ಕಳವೆ, “ನೀರಿದ್ದರೆ ಮಾತ್ರ ನಾವಿರುತ್ತೇವೆ. ನೀರಿನ ಮಹತ್ವ ತಿಳಿಯಲು ಬರಗಾಲವೇ ಬರಬೇಕಿಲ್ಲ. ನೀರಿನ ಅಭಾವವಾದರೆ ಮಾನವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು, ಆದರೆ ವನ್ಯಜೀವಿಗಳ ಗತಿಯೇನು?” ಎಂದು ಪ್ರಶ್ನಿಸಿದರು.

    ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಪ್ರಾಧ್ಯಾಪಕ ಡಾ. ಗಿರೀಶ ಜನ್ನೆ ಮಾತನಾಡಿ, “ಕೃಷಿ ಭೂಮಿ ಚಿನ್ನದ ಮೊಟ್ಟೆಯಿಡುವ ಕೋಳಿಯಂತೆ ತಲೆಮಾರುಗಳಿಗೆ ಆರ್ಥಿಕ ಭದ್ರತೆ ನೀಡುತ್ತದೆ. ಸರ್ಕಾರದ ಅವೈಜ್ಞಾನಿಕ ಯೋಜನೆಗಳು ನೀಡುವ ಪರಿಹಾರ ಕೇವಲ ಒಂದು ಕುಟುಂಬ ಅಥವಾ ತಲೆಮಾರಿಗೆ ಮಾತ್ರ ಸೀಮಿತ. ಶರಾವತಿ ಕಣಿವೆಯ ಅಪರೂಪದ ಗಿಡಮೂಲಿಕೆಗಳನ್ನು ಸುಸ್ಥಿರವಾಗಿ ಬಳಸುವ ಜ್ಞಾನ ನಮಗಿರಬೇಕು. ಕುಂಬಾರಕಪ್ಪೆ ತನ್ನ ಮರಿಗಳನ್ನು ರಕ್ಷಿಸಿಕೊಳ್ಳುವಂತೆ, ನಾವೆಲ್ಲರೂ ಶರಾವತಿ ಮಾತೆಯನ್ನು ಉಳಿಸಿಕೊಳ್ಳಲು ಒಂದಾಗಬೇಕು,” ಎಂದು ಕರೆ ನೀಡಿದರು.

    ಯೋಜನಾ ನಿರಾಶ್ರಿತರ ಅನುಭವ ಹಂಚಿಕೆ:

    ಸಂಕಿರಣದಲ್ಲಿ ವಿವಿಧ ಯೋಜನೆಗಳಿಂದ ನಿರಾಶ್ರಿತರಾದ ಸಂತ್ರಸ್ತರು ಭಾಗವಹಿಸಿ ತಮ್ಮ ಅಳಲು ಹಾಗೂ ಅನುಭವಗಳನ್ನು ಹಂಚಿಕೊಂಡರು.

    ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀ ಸುಧಾಕರ ಕಟ್ಟೆಮನೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

    About The Author

    error: Content is protected !!