

ತಪ್ಪಾದ ಉಪವಾಸ ಕ್ರಮಗಳಿಂದ ಶರೀರಕ್ಕೆ ತೀವ್ರ ಹಾನಿ

ಉಪವಾಸದ ಸರಿಯಾದ ಆಚರಣೆಗೆ ಶಾಸ್ತ್ರೀಯ ಹಾಗೂ ವೈದ್ಯಕೀಯ ಮಾರ್ಗದರ್ಶನ ಅಗತ್ಯ

ಶ್ರೀಮಠಕ್ಕೆ ಉದ್ಯಮಿ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್ ಭೇಟಿ

ಗೋಕರ್ಣ (ಆಗಸ್ಟ್ 11): “ಉಪವಾಸವನ್ನು ನಿಯಮಬದ್ಧವಾಗಿ ಹಾಗೂ ಸರಿಯಾಗಿ ಮಾಡಿದಾಗ ದೇಹ ನಿಶ್ಯಕ್ತಿಯಾಗುವುದಿಲ್ಲ; ಬದಲಿಗೆ ಅದು ಬಲವೃದ್ಧಿಗೆ ಸಹಕಾರಿಯಾಗುತ್ತದೆ. ಸರಿಯಾದ ಉಪವಾಸದಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.


ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಗಸ್ಟ್ 11ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಉಪವಾಸ’ದ ಕುರಿತಾಗಿ ಶ್ರೀಗಳು ಪ್ರವಚನ ಅನುಗ್ರಹಿಸುತ್ತಿದ್ದರು.
“ಸರಿಯಾದ ಉಪವಾಸದಿಂದ ಹೃದಯ ಶುದ್ಧತೆ, ದೇಹದಿಂದ ಬೇಡವಾದ ಕಶ್ಮಲಗಳ ನಿರ್ಗಮನ, ಬಾಯಿ-ಗಂಟಲಿನ ಶುದ್ಧತೆ ಹಾಗೂ ಹಿತವಾದ ಹಸಿವು ಪ್ರಾಪ್ತಿಯಾಗುತ್ತದೆ. ಧರ್ಮಶಾಸ್ತ್ರದಲ್ಲಿ ನಿತ್ಯೋಪವಾಸ, ವ್ರತೋಪವಾಸ ಹಾಗೂ ಪಾಪಗಳನ್ನು ತೊಳೆದುಕೊಳ್ಳುವ ‘ಕೃಚ್ಛ್ರ’ ಉಪವಾಸಗಳ ಬಗ್ಗೆ ಹೇಳಲಾಗಿದೆ. ಆಯುರ್ವೇದದಲ್ಲೂ ಉಪವಾಸಕ್ಕೆ ಮಹತ್ವದ ಸ್ಥಾನವಿದ್ದು, ಸರಿಯಾದ ಆಹಾರದಿಂದ ಗುಣವಾಗದ ರೋಗಗಳನ್ನು ಉಪವಾಸದ ಮೂಲಕ ಪರಿಹರಿಸಿಕೊಳ್ಳಬಹುದು. ಇವೆರಡರಿಂದಲೂ ಸಾಧಿಸದೇ ಇದ್ದಾಗ ಮಾತ್ರ ಆಯುರ್ವೇದ ಔಷಧಿಯನ್ನು ಸೂಚಿಸುತ್ತದೆ,” ಎಂದು ವಿವರಿಸಿದರು.
ತಪ್ಪಾದ ಉಪವಾಸ ಅಪಾಯಕಾರಿ:
“ಜ್ಞಾನವಿಲ್ಲದೆ ಅಥವಾ ಅತಿಯಾಗಿ ಉಪವಾಸ ಮಾಡುವುದರಿಂದ ಸಂಧಿನೋವು, ದೇಹದ ದುರ್ಬಲತೆ, ಹಸಿವು ಮತ್ತು ರುಚಿಯ ನಾಶ ಹಾಗೂ ಮಾನಸಿಕ ಅಸಮತೋಲನ ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಯ ಉದ್ದೇಶಕ್ಕೆ ಉಪವಾಸ ಮಾಡಬಾರದು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು ಹಾಗೂ ರೋಗಬಾಧಿತರು ಸ್ವಯಂಪ್ರೇರಿತ ಉಪವಾಸ ಮಾಡಬಾರದು,” ಎಂದು ಶ್ರೀಗಳು ಎಚ್ಚರಿಸಿದರು.
ವಿಜಯ ಸಂಕೇಶ್ವರ್ ಭೇಟಿ: ಖ್ಯಾತ ಉದ್ಯಮಿ, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್ ದಂಪತಿಗಳು ಶ್ರೀಮಠಕ್ಕೆ ಆಗಮಿಸಿ, ಶ್ರೀಕರಾರ್ಚಿತ ರಾಮಪೂಜೆ ಹಾಗೂ ಗೋಪೂಜೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.
ಗುರುಭಿಕ್ಷಾ ಸೇವೆ: ಸಿದ್ದಾಪುರ ಹವ್ಯಕ ಮಂಡಲದ ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪ-ಇಡುವಾಣಿ ವಲಯಗಳ ಪರವಾಗಿ ಬಿ. ಎಸ್. ಮಂಜುನಾಥ ಶರ್ಮಾ ದಂಪತಿಗಳು ಗುರುಭಿಕ್ಷಾಸೇವೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆ. ಎನ್. ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ ಹಾಗೂ ದಿನ ಪ್ರಧಾನರಾಗಿ ರಾಧಾಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ