

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಧಾರ್ಮಿಕ ಕ್ಷೇತ್ರವಾದ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ನಾಗರಪಂಚಮಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.

ನಾಗಾರಾಧನೆಗೆ ಅತ್ಯಂತ ಪುಣ್ಯ ಕ್ಷೇತ್ರವೆನಿಸಿದ ಈ ದೇವಾಲಯಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಹರಿದುಬಂದಿದ್ದರು. ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಿಗ್ಗೆಯಿಂದ ರಾತ್ರಿ 8:30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ವಿಶೇಷ ಪೂಜೆ ಹಾಗೂ ಧಾರ್ಮಿಕ ಸೇವೆಗಳು:
ನಾಗರಪಂಚಮಿಯ ಶುಭ ಸಂದರ್ಭದಲ್ಲಿ ಶ್ರೀ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ, ಸರ್ವಾಭರಣ ಸೇವೆ, ನಾಗ ಮಂತ್ರಾಭಿಷೇಕ ಹಾಗೂ ರುದ್ರಾಭಿಷೇಕ, ಬಾಳೆಗೊನೆ ಸೇವೆ ಸೇರಿದಂತೆ ವಿವಿಧ ಹರಕೆ ಸೇವೆಗಳು ಭಕ್ತಿಪೂರ್ವಕವಾಗಿ ಜರುಗಿದವು.

ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ಭೋಜನ ನೆರವೇರಿದರೆ, ರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.


ನಾಗಬನದಲ್ಲಿ ಹಾಲಿನ ಅಭಿಷೇಕ:
ಶ್ರೀ ಕ್ಷೇತ್ರದ ಪ್ರವೇಶ ದ್ವಾರದಲ್ಲಿರುವ ಪವಿತ್ರ ‘ನಾಗಬನ’ದಲ್ಲಿಯೂ ದಿನವಿಡೀ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಗಳು ನಡೆದವು. ಭಕ್ತರು ಹರಕೆ ರೂಪದಲ್ಲಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಈ ‘ನಾಗಬನ’ದಲ್ಲಿ ಅಪಾರ ಸಂಖ್ಯೆಯ ಸದ್ಭಕ್ತರು ಸರತಿಯಲ್ಲಿ ನಿಂತು ನಾಗದೇವರಿಗೆ ಹಾಲೆರೆದು ತಮ್ಮ ಭಕ್ತಿ ಸೇವೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಅಪಾರ ಜನಸ್ತೋಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿಯು ವಿವಿಧ ಸೇವಾ ಕೌಂಟರ್‌ಗಳನ್ನು ತೆರೆದು ಜನದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.
ಟ್ರಾಫಿಕ್ ಸಮಸ್ಯೆ ಹಾಗೂ ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಸ್ವಯಂಸೇವಕರು ಕಾರ್ಯನಿರ್ವಹಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಿದರು. ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.