August 21, 2026

ಹೊನ್ನಾವರ ತಹಸೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಮಂಗಳೂರು ತಂಡ ದಿಢೀರ್ ದಾಳಿ.

ಹೊನ್ನಾವರ: ಇಲ್ಲಿನ ತಹಸೀಲ್ದಾರ್ ಕಚೇರಿಯ ಮೇಲೆ ಮಂಗಳೂರಿನಿಂದ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ, ಮಹತ್ವದ ದಾಖಲೆ ಹಾಗೂ ಕಡತಗಳ ಪರಿಶೀಲನೆ ನಡೆಸಿದೆ.

ನಾಲ್ವರು ಅಧಿಕಾರಿಗಳನ್ನೊಳಗೊಂಡ ಈ ತಂಡವು KA-42-G 06685 ನೋಂದಣಿ ಸಂಖ್ಯೆಯ ವಾಹನದಲ್ಲಿ ಆಗಮಿಸಿ ಕಚೇರಿಗೆ ದಾಳಿ ನಡೆಸಿದ್ದು, ತಡರಾತ್ರಿಯವರೆಗೂ ಸುದೀರ್ಘ ತಪಾಸಣೆ ಮತ್ತು ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ.

ಮೊಬೈಲ್, ಫೋನ್ ಪೇ ಹಾಗೂ ಗೂಗಲ್ ಪೇ ಖಾತೆಗಳ ತಪಾಸಣೆ:

ತಪಾಸಣೆಯ ವೇಳೆ ಕಚೇರಿಯಲ್ಲಿದ್ದ ಅಧಿಕಾರಿಗಳು, ಖಾಯಂ ಸಿಬ್ಬಂದಿಗಳು ಹಾಗೂ ಹೊರಗುತ್ತಿಗೆ ನೌಕರರ ಮೊಬೈಲ್ ಫೋನ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಡಿಜಿಟಲ್ ವಹಿವಾಟು ಪರಿಶೀಲನೆ: ಸಿಬ್ಬಂದಿ ಹಾಗೂ ಅಧಿಕಾರಿಗಳು ಬಳಸುತ್ತಿರುವ ‘ಫೋನ್ ಪೇ’ (PhonePe) ಮತ್ತು ‘ಗೂಗಲ್ ಪೇ’ (Google Pay) ಖಾತೆಗಳ ಹಣ ಜಮೆಯ (UPI Transactions) ವಿವರಗಳನ್ನು ಪ್ರಮುಖವಾಗಿ ಪರಿಶೀಲಿಸಲಾಗಿದೆ.

ತಹಸೀಲ್ದಾರ್ ವಿಚಾರಣೆ: ಭಟ್ಕಳದಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಹೊನ್ನಾವರ ತಹಶೀಲ್ದಾರ್ ಅವರ ಮೊಬೈಲ್ ಮೂಲಕವೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

    ಕಡತ ವಿಲೇವಾರಿ ಹಾಗೂ ಶುಲ್ಕದ ಮಾಹಿತಿ:

    ಕಚೇರಿಯ ಪ್ರಮುಖ ದಾಖಲೆಗಳು, ಸಾರ್ವಜನಿಕರ ಅರ್ಜಿಗಳ ಕಡತ ವಿಲೇವಾರಿ, ಕಚೇರಿಯಿಂದ ಸಂಗ್ರಹಿಸಲಾದ ಶುಲ್ಕದ ವಿವರ ಹಾಗೂ ಬಾಕಿ ಉಳಿದಿರುವ (Pending Files) ಕಡತಗಳ ಕುರಿತು ಲೋಕಾಯುಕ್ತ ಅಧಿಕಾರಿಗಳ ತಂಡ ಸಮಗ್ರ ಮಾಹಿತಿ ಕಲೆಹಾಕಿದೆ.

    ಸಾರ್ವಜನಿಕ ಸೇವೆಗೆ ಅಡಚಣೆಯಿಲ್ಲ:

    ಲೋಕಾಯುಕ್ತ ದಾಳಿ ನಡೆದಿದ್ದರೂ, ಕಚೇರಿಗೆ ಆಗಮಿಸಿದ ಸಾರ್ವಜನಿಕರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಹೀಗಾಗಿ ಸಾಮಾನ್ಯ ಜನರ ಕಚೇರಿ ಕೆಲಸಕಾರ್ಯಗಳಿಗೆ ಯಾವುದೇ ತೊಂದರೆಯಾಗದೆ ದೈನಂದಿನ ಸೇವೆ ಮುಂದುವರಿಯಿತು.

    ರಾತ್ರಿಯವರೆಗೂ ಲೋಕಾಯುಕ್ತ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆಗಳ ತಪಾಸಣೆ ಮುಂದುವರಿದಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ದಾಳಿಯ ನಿಖರ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ಸ್ಪಷ್ಟತೆ ಸಿಗಲಿದೆ.                                       ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

    About The Author

    error: Content is protected !!