

ಗೋಕರ್ಣ: ಯೋಗ ದೃಷ್ಟಿಗೂ ಇಂದಿನ ಆಧುನಿಕ ವೈದ್ಯ ಪದ್ಧತಿಗೂ ವ್ಯತ್ಯಾಸಗಳಿದ್ದು, ಭಾರತೀಯ ಪರಂಪರೆಯಲ್ಲಿ ಉಲ್ಲೇಖಿತವಾಗಿರುವ ಹಲವಾರು ಸತ್ಯಗಳು ಯೋಗ ದೃಷ್ಟಿಗಷ್ಟೇ ಗೋಚರಿಸುತ್ತವೆ. ಅವು ಇಂದಿನ ವೈದ್ಯಕೀಯ ಉಪಕರಣಗಳಿಗೆ ಕಾಣಸಿಗುವುದಿಲ್ಲ. ಶಾಸ್ತ್ರಗಳಲ್ಲಿ ಉಲ್ಲೇಖಿತ ಅಂಶಗಳನ್ನು ನಮ್ಮ ಪೂರ್ವಜರು ಯೋಗ ದೃಷ್ಟಿಯಿಂದ ಕಂಡುಕೊಂಡಿದ್ದು, ಇಂದಿನ ವಿಜ್ಞಾನ ಈ ವಿಚಾರಗಳನ್ನು ಇನ್ನೂ ಕಂಡುಕೊಳ್ಳಬೇಕಿದೆಯಷ್ಟೇ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ **‘ಅನ್ನಬ್ರಹ್ಮ ಚಾತುರ್ಮಾಸ್ಯ’**ದ ಧರ್ಮಸಭೆಯಲ್ಲಿ ‘ಜಠರಾಗ್ನಿ’ ಕುರಿತು ಶ್ರೀಗಳು ಪ್ರವಚನ ನೀಡಿದರು.

ಅಗ್ನಿಯ ಸ್ವರೂಪ: ಜಠರಾಗ್ನಿಯ ಪ್ರಮುಖ ಅಭಿವ್ಯಕ್ತಿಯೇ ಹಸಿವು. ದೇಹದ ಉಷ್ಣತೆ, ಹಸಿವು ಮತ್ತು ಆಹಾರ ಜೀರ್ಣವಾಗುವ ಶಕ್ತಿಯನ್ನೇ ಪರಂಪರೆಯಲ್ಲಿ ‘ಅಗ್ನಿ’ ಎನ್ನಲಾಗಿದೆ. ಅಗ್ನಿರೂಪದ ರುದ್ರ ಜೀರ್ಣಕ್ಕೆ ಕಷ್ಟವಾಗುವ ವಿಷಗಳನ್ನು ಜೀರ್ಣವಾಗಿಸಿ ಅಮೃತವನ್ನು ದೇಹಕ್ಕೆ ನೀಡಿದರೆ, ವಿಷ್ಣು ರೂಪದ ಶ್ಲೇಷ್ಮವು ಅದನ್ನು ದೇಹಕ್ಕೆ ಉಣಬಡಿಸುತ್ತದೆ. ಅಗ್ನಿ ಕಾರ್ಯ ನಿಲ್ಲಿಸಿದರೆ ಜೀವಿಯ ಮರಣ ಸಂಭವಿಸುತ್ತದೆ.

ಅಗ್ನಿ ಇರುವುದೆಲ್ಲಿ?: ಶಂಕರಾಚಾರ್ಯರು ಸೌಂದರ್ಯ ಲಹರಿಯಲ್ಲಿ ನಾಭಿಯ ಮಣಿಪೂರಕ ಚಕ್ರದಲ್ಲಿ ಅಗ್ನಿ ಇದೆ ಎಂದಿದ್ದಾರೆ. ಅಷ್ಟಾಂಗ ಹೃದಯ ಹಾಗೂ ಭಾವಪ್ರಕಾಶ ಗ್ರಂಥಗಳಲ್ಲಿ ನಾಭಿಯ ಎಡಭಾಗದಲ್ಲಿ ಜಠರಾಗ್ನಿಯ ಕೇಂದ್ರವಿದೆ ಎಂದು ವಿವರಿಸಲಾಗಿದೆ.


ಎಡಮಗ್ಗಲಲ್ಲಿ ಮಲಗುವುದರ ಮರ್ಮ: ಅಗ್ನಿಯು ನಾಭಿಯ ಎಡಭಾಗದಲ್ಲಿರುವುದರಿಂದ ರಾತ್ರಿ ವೇಳೆ ಎಡಮಗ್ಗಲಿನಲ್ಲಿ ಮಲಗಬೇಕು. ಇದರಿಂದ ಜೀರ್ಣಕ್ರಿಯೆಗೆ ಸೂಕ್ತ ಹಾಗೂ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಅಂಬಿಗ ಹಾಗೂ ವಿಶ್ವಕರ್ಮ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ಅಂಬಿಗ ಹಾಗೂ ವಿಶ್ವಕರ್ಮ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಶ್ರೀಮಠವು ಭಕ್ತ ಸಮಾಜದ ಜೊತೆಗೆ ಸದಾ ಇರಲಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಅಂಬಿಗ ಸಮಾಜದ ಗುರು ಅಂಬಿಗ, ಮಹೇಶ ಗೋವಿಂದ ಅಂಬಿಗ, ಮಂಜುನಾಥ ಶಂಕರ ಅಂಬಿಗ ಹಾಗೂ ವಿಶ್ವಕರ್ಮ ಸಮಾಜದ ಶಂಭು ಆಚಾರಿ ವಂದೂರು, ಮಧುಕರ ಆಚಾರಿ ಹೊನ್ನಾವರ, ಜಗದೀಶ ಆಚಾರಿ ಮಿರ್ಜಾನ, ಗಣೇಶ ಆಚಾರಿ ಹೆಬ್ಬನಕೇರೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಹಿರಿಯ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಪಿ.ಎನ್. ಮನಮೋಹನ್, ಶಂಭುಶರ್ಮಾ, ನರಸಿಂಹ ಹಾಗೂ ಸ್ಥಳೀಯ ಮುಖಂಡ ಮಹೇಶ್ ಶೆಟ್ಟಿ ಶ್ರೀಗಳ ಆಶೀರ್ವಾದ ಪಡೆದರು. ಜಾಲತಾಣಿಗರ ಬಳಗದ ಪರವಾಗಿ ಉದಯಶಂಕರ ನೀರ್ಪಾಜೆ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ