

ಮಿತಿಮೀರಿದ ಸೊಪ್ಪು-ತರಕಾರಿ ಸೇವನೆ ದೇಹಕ್ಕೆ ಹಾನಿಕಾರಕ

ಬೆಳಿಗ್ಗೆ 4 ಗಂಟೆಗೆ ಆಹಾರ ಸೇವಿಸುವ ಯುವಕರ ಪ್ರವೃತ್ತಿ ಸರಿಯಲ್ಲ: ಶ್ರೀಗಳ ಕಳವಳ

ಚಾತುರ್ಮಾಸ್ಯದಲ್ಲಿ ಅನಾವರಣಗೊಳ್ಳಲಿದೆ 300ಕ್ಕೂ ಅಧಿಕ ಪಾರಂಪರಿಕ ಸಾತ್ವಿಕ ಭಕ್ಷ್ಯಗಳು

ಗೋಕರ್ಣ (ಜು. 30): ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರವೇ ಪ್ರಮುಖ ಆಧಾರವಾಗಿದೆ. ಹಿತವಾದ, ಮಿತವಾದ ಹಾಗೂ ಸರಿಯಾದ ಸಮಯಕ್ಕೆ ಸೇವಿಸುವ ಆಹಾರವೇ ರೋಗಮುಕ್ತ ಜೀವನದ ಮೂಲ ಸೂತ್ರವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.


ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಜುಲೈ 30ರಂದು ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯ ಭಾಗವಾಗಿ ಅವರು ಆಶೀರ್ವಚನ ನೀಡಿದರು.
ಆಯುರ್ವೇದದ ಪ್ರಸಿದ್ಧ ವೈದ್ಯ ವಾಗ್ಭಟ ಮತ್ತು ಆರೋಗ್ಯದ ಅಧಿದೇವತೆ ಧನ್ವಂತರಿಯ ಪ್ರಸಂಗವನ್ನು ಉಲ್ಲೇಖಿಸಿದ ಶ್ರೀಗಳು, “ಯಾರು ರೋಗರಹಿತರು ಎಂಬ ಪ್ರಶ್ನೆಗೆ ವಾಗ್ಭಟರು ‘ಹಿತಭುಕ್, ಮಿತಭುಕ್, ಅಶಾಕಭುಕ್’ ಎಂಬ ಉತ್ತರ ನೀಡಿದ್ದಾರೆ. ದೇಹಕ್ಕೆ ಹಿತವಾದದ್ದನ್ನು ಮಾತ್ರ ಸೇವಿಸುವುದು, ಅಗತ್ಯವಿದ್ದಷ್ಟೇ ತಿನ್ನುವುದು ಹಾಗೂ ಮಿತಿಮೀರಿ ಸೊಪ್ಪು-ತರಕಾರಿಗಳನ್ನು ತಿನ್ನದಿರುವುದು ಆರೋಗ್ಯವಂತ ಮನುಷ್ಯನ ಲಕ್ಷಣ. ಇಷ್ಟ ಬಂದದ್ದನ್ನು ತಿನ್ನುವುದಕ್ಕಿಂತ ದೇಹಕ್ಕೆ ಒಳ್ಳೆಯದನ್ನು ತಿನ್ನುವುದನ್ನು ಕಲಿಯಬೇಕು,” ಎಂದರು.
ಸೂರ್ಯೋದಯಕ್ಕೂ ಮುನ್ನ ಆಹಾರ ಸೇವನೆ ಯೋಗ್ಯವಲ್ಲ:
ಇತ್ತೀಚೆಗೆ ಮಹಾನಗರಗಳ ಯುವ ಸಮೂಹದಲ್ಲಿ ಬೆಳಿಗ್ಗೆ 4 ಗಂಟೆಗೆ ಹೋಟೆಲ್ಗಳ ಮುಂದೆ ನಿಂತು ಆಹಾರ ಸೇವಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, “ಸೂರ್ಯೋದಯಕ್ಕೂ ಮೊದಲೇ ಆಹಾರ ತಿನ್ನುವ ಕ್ರಮ ಸರಿಯಲ್ಲ. ಈ ಸಮಯದಲ್ಲಿ ಅಮೃತವನ್ನೇ ತಿಂದರೂ ಅದು ದೇಹಕ್ಕೆ ವಿಷಮಯವಾಗುತ್ತದೆ. ಇಂದು ಕ್ಯಾಲೋರಿ ಅಳೆದು ತಿನ್ನುವ ಅಭ್ಯಾಸ ಬೆಳೆದಿದೆ, ಆದರೆ ಸರಿಯಾದ ಸಮಯಕ್ಕೆ ತಿಂದರೆ ಎಷ್ಟು ಬೇಕು ಎಂಬುದನ್ನು ಹೊಟ್ಟೆಯೇ ಸೂಚಿಸುತ್ತದೆ. ಜೀರ್ಣವಾಗದೆ ದೇಹದಲ್ಲಿ ಉಳಿಯುವ ಆಹಾರವು ಆಯುರ್ವೇದದಲ್ಲಿ ‘ಆಮ’ ಎನಿಸಿಕೊಳ್ಳಲಿದ್ದು, ಅದೇ ಸಕಲ ರೋಗಗಳ ಮೂಲ,” ಎಂದು ಎಚ್ಚರಿಸಿದರು.
“ಯಾವುದೇ ಗಣ್ಯವ್ಯಕ್ತಿಯನ್ನು ಭೇಟಿಯಾಗುವ ಮುನ್ನ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸುವಂತೆ, ನಮ್ಮ ದೇಹ ಎಂಬ ಪ್ರಮುಖ ಅಂಗಕ್ಕೆ ಆಹಾರ ನೀಡುವ ಮುನ್ನ – ಏನನ್ನು, ಹೇಗೆ, ಯಾವಾಗ ತಿನ್ನುತ್ತಿದ್ದೇವೆ ಎಂಬ ಪರಿಶೀಲನೆ ಅಗತ್ಯ,” ಎಂದು ಕಿವಿಮಾತು ಹೇಳಿದರು.
ಅತಿಯಾದ ಸೊಪ್ಪು-ತರಕಾರಿ ರೋಗಕ್ಕೆ ಮೂಲ:
“ಮಿತಿ ಮೀರಿದ ಸೊಪ್ಪು ಹಾಗೂ ತರಕಾರಿಗಳ ಸೇವನೆಯು ಕಣ್ಣು, ಮೂಳೆಗಳ ಸಮಸ್ಯೆ ಹಾಗೂ ಮಂದಬುದ್ಧಿಗೆ ಕಾರಣವಾಗುತ್ತದೆ ಎಂದು ಆಯುರ್ವೇದ ಗ್ರಂಥಗಳು ಎಚ್ಚರಿಸಿವೆ.”
— ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
60 ದಿನಗಳಲ್ಲಿ 300+ ವೈವಿಧ್ಯಮಯ ಪಾರಂಪರಿಕ ಆಹಾರ:
ಈ ಬಾರಿಯ ಚಾತುರ್ಮಾಸ್ಯದಲ್ಲಿ ಭಕ್ತಾದಿಗಳಿಗೆ 300ಕ್ಕೂ ಹೆಚ್ಚು ಸಾತ್ವಿಕ ಹಾಗೂ ಪಾರಂಪರಿಕ ಭಕ್ಷ್ಯಗಳನ್ನು ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ. ಮಠದ ಮಾತೃವಿಭಾಗದ ನೇತೃತ್ವದಲ್ಲಿ ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ತಂಬುಳಿ, ಕೋಸಂಬರಿ, ಪಾಯಸ ಸೇರಿದಂತೆ ಸಾಂಪ್ರದಾಯಿಕ ಅಡುಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ‘ಭೋಜನ ಕುತೂಹಲಮ್’ ಮತ್ತು ‘ಕ್ಷೇಮ ಕುತೂಹಲಮ್’ ಎಂಬ ಪ್ರಾಚೀನ ಗ್ರಂಥಗಳನ್ನು ಆಧರಿಸಿ ಆರೋಗ್ಯಕರ ಆಹಾರಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ರಾಮಚಂದ್ರ ಭಟ್ ದಂಪತಿ ಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮಠದ ಶಾಸ್ತ್ರಿಗಳಾದ ವೇ.ಮೂ. ಸುಬ್ರಾಯ್ ಭಟ್ ಅಗ್ನಿಹೋತ್ರಿ, ವೇ.ಮೂ. ಮಂಜುನಾಥ ಶಾಸ್ತ್ರೀ, ಶ್ರೀಚರಣ ವಿಭಾಗದ ಸಂಯೋಜಕ ರಾಘವೇಂದ್ರ ಮಧ್ಯಸ್ಥ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಸುರೇಶ್ ಆಡುಗೋಡಿ, ಮಧು ಜಿ.ಕೆ., ದಿನೇಶ್ ಹೆಗಡೆ, ಗಜಾನನ ಭಟ್, ರಮೇಶ್ ವಿಭೂತಿಮನೆ, ದಿನ ಪ್ರಧಾನರಾದ ಪ್ರಕಾಶ್ ಹೆಗಡೆ ದಂಪತಿ, ಶಿಕ್ಷಣ ತಜ್ಞ ಡಾ. ಜಿ. ಜಿ. ಹೆಗಡೆ, ಉದ್ಯಮಿ ಶಶಾಂಕ್ ಹೆಗಡೆ ಕವಲಕ್ಕಿ ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ