

ಹೊನ್ನಾವರ: ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದ ಅಪರೂಪದ ಹಾಸ್ಯ ಕಲಾವಿದ, ತಮ್ಮ ಸಹಜ ಹಾಗೂ ಸಭ್ಯ ಹಾಸ್ಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದ ಶ್ರೀಧರ ಭಟ್ ಕಾಸರಗೋಡು ಅವರ ನಿಧನಕ್ಕೆ ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ಈ ಕುರಿತು ಸಂತಾಪ ಸೂಚಿಸಿರುವ ಸಂಸದರು, “ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣರ ನಂತರ ಬಡಗು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಅಪರೂಪದ ಶಕ್ತಿ ಶ್ರೀಧರ ಭಟ್ ಅವರದ್ದಾಗಿತ್ತು. ಎಂದಿಗೂ ಅಪಹಾಸ್ಯಕ್ಕೆ ಆಸ್ಪದ ನೀಡದೆ, ಅತ್ಯಂತ ಸಭ್ಯ, ಸೊಗಸಾದ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ವಿಶಿಷ್ಟ ಶೈಲಿ ಅವರಲ್ಲಿತ್ತು,” ಎಂದು ಸ್ಮರಿಸಿದ್ದಾರೆ.


“ಹಲವು ದಶಕಗಳ ಕಾಲ ಯಕ್ಷರಂಗದಲ್ಲಿ ಅನನ್ಯ ಸೇವೆ ಸಲ್ಲಿಸಿದ ಅವರು ತಮ್ಮ ನೈಜ ಅಭಿನಯ, ಸಮಯೋಚಿತ ಸಂಭಾಷಣೆ ಹಾಗೂ ನಗುಮುಖದ ಮಾತುಗಳಿಂದ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಕೆಯಿಂದ ಬಡಗು ಯಕ್ಷಗಾನ ಕ್ಷೇತ್ರವು ಅತ್ಯುತ್ತಮ ಕಲಾವಿದನೊಬ್ಬನನ್ನು ಕಳೆದುಕೊಂಡು ಬಡವಾಗಿದೆ,” ಎಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಭಗವಂತನು ಅಗಲಿದ ಮೃತರ ಚೇತನಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಹಾಗೂ ಯಕ್ಷಗಾನ ಕಲಾಬಂಧುಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಕಾಗೇರಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.
ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ: ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಉಚಿತ ಆಕ್ಷೇಪಣಾ ಪತ್ರ ಸಲ್ಲಿಕೆಗೆ ನಿರ್ಧಾರ – ರವೀಂದ್ರ ನಾಯ್ಕ