

ಹಿರೇಗುತ್ತಿ (ಆಗಸ್ಟ್ 03, 2026): ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸುರಕ್ಷಿತ ಬಾಲ್ಯ ನಿರ್ಮಾಣಕ್ಕೆ ಕಾನೂನುಗಳ ಅರಿವು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಉತ್ತರ ಕನ್ನಡ) ಕಾನೂನು ಅಧಿಕಾರಿ ದೇವಿದಾಸ ಎನ್. ನಾಯ್ಕ ಹೇಳಿದರು.
ಇಲ್ಲಿನ ಸೆಕೆಂಡರಿ ಹೈಸ್ಕೂಲಿನಲ್ಲಿ ಆಯೋಜಿಸಲಾಗಿದ್ದ “ಅರಿವು ಜಾಗೃತಿ ಕಾರ್ಯಕ್ರಮ – ಮಕ್ಕಳ ರಕ್ಷಣೆಗಾಗಿರುವ ಕಾಯ್ದೆಗಳ ಬಗ್ಗೆ ಅರಿವು ಮತ್ತು ಸಬಲೀಕರಣ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಗ್ರ ಮಾಹಿತಿಯನ್ನು ಹೊಂದಿರಬೇಕು” ಎಂದು ಅವರು ತಿಳಿಸಿದರು.

ಪ್ರಮುಖರ ಅನಿಸಿಕೆಗಳು:
ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿ ಅಗತ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಎನ್. ನಾಯಕ ಮಾತನಾಡಿ, “ಮಕ್ಕಳಲ್ಲಿ ಕಾನೂನು ಅರಿವು, ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಇಂತಹ ಜಾಗೃತಿ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿವೆ” ಎಂದರು.

ಲಿಂಗ ಸಮಾನತೆ ಮತ್ತು ಮಕ್ಕಳ ಹಕ್ಕುಗಳು:
ಜಿಲ್ಲಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ವೀಣಾ ಹರಿಕಂತ್ರ ಅವರು ಲಿಂಗ ಸಮಾನತೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರೆ, ಕಾನೂನು ಸಲಹೆಗಾರರಾದ ಧನಲಕ್ಷ್ಮೀ ಅವರು ಮಕ್ಕಳ ರಕ್ಷಣೆಯ ಪ್ರಮುಖ ಕಾಯ್ದೆಗಳ ಬಗ್ಗೆ ವಿವರಿಸಿದರು.

ಕುಟುಂಬ ಹಾಗೂ ಸಮಾಜದ ಪಾತ್ರ:
ಅಂಗನವಾಡಿ ಮೇಲ್ವಿಚಾರಕಿ ಮೋಹಿನಿ ನಾಯ್ಕ ಅವರು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕುಟುಂಬ, ಶಾಲೆ ಮತ್ತು ಸಮಾಜದ ಪಾತ್ರವನ್ನು ಒತ್ತಿಹೇಳಿದರು. ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ ಅವರು ವಿದ್ಯಾರ್ಥಿಗಳು ಈ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.


ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ರಚಿತಾ ನಾಯ್ಕ ಅವರು ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.
ವೇದಿಕೆಯಲ್ಲಿ ಅಂಗನವಾಡಿ ಶಿಕ್ಷಕಿ ಅನಿತಾ ನಾಯಕ, ಹೈಸ್ಕೂಲ್ ಶಿಕ್ಷಕರಾದ ಬಾಲಚಂದ್ರ ಅಡಿಗೋಣ, ನಾಗರಾಜ ನಾಯಕ, ಮಹಾದೇವ ಗೌಡ, ಭರತ್ ಭಟ್ಟ, ಮದನ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮಹಿಮಾ ಗೌಡ, ಖುಷಿ ಗೌಡ ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಶಿವಾನಿ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೀತಮ್ ಪಾಲನಕರ್ ಸ್ವಾಗತಿಸಿದರು, ಕೀರ್ತಿ ಅಂಬಿಗ ನಿರೂಪಿಸಿದರು ಹಾಗೂ ಧನಶ್ರೀ ನಾಯ್ಕ ವಂದಿಸಿದರು. ಶಿಕ್ಷಕ ಎನ್. ರಾಮು ಹಿರೇಗುತ್ತಿ ಕಾರ್ಯಕ್ರಮ ಸಂಯೋಜಿಸಿದ್ದು, ಗೋಪಾಲಕೃಷ್ಣ ಗುನಗಾ ಹಾಗೂ ಗೋವಿಂದ ನಾಯ್ಕ ಸಹಕರಿಸಿದರು. ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ವರದಿ : ಎನ್.ರಾಮು ಹಿರೇಗುತ್ತಿ.
About The Author




More Stories
ಹಿರೇಗುತ್ತಿ ಹೈಸ್ಕೂಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’
ಮಿರ್ಜಾನ್ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಭಕ್ತಿ-ಶ್ರದ್ಧೆಯಿಂದ ನಡೆದ ‘ಗುರು ಪೂರ್ಣಿಮೆ’ ಆಚರಣೆ
ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ