

- ಎಷ್ಟು ನೀರನ್ನು ಕುಡಿಯಬೇಕು? ಗೂಗಲ್ ನೋಡಿ ನೀರು ಕುಡಿಯುವುದಲ್ಲ!
- ಹೃದಯ ಕಮಲ ಮತ್ತು ಶರೀರದ ಹೃದಯ ಬೇರೆಬೇರೆ.
- ಸರಿಯಾದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿ.
ಗೋಕರ್ಣ (ಉತ್ತರ ಕನ್ನಡ): ಅಕಾಲದಲ್ಲಿ ಹಸಿವಾದರೆ ಅಥವಾ ಯಾವಾಗಲೋ ನಿದ್ದೆ ಬಂದರೆ ದೇಹದ ಯಂತ್ರ ಕೆಟ್ಟಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ನಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳುವ ಮೂಲಕ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 04.08.2026 ರಂದು ನಡೆದ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಶ್ರೀಗಳು ಮಾತನಾಡಿದರು.

ಶರೀರದ ನೈಸರ್ಗಿಕ ವೇಗ ತಡೆಯದಿರಿ: “ಶರೀರದ ನೈಸರ್ಗಿಕ ಕ್ರಮದಲ್ಲಿ ಕೃತ್ರಿಮ ಹಸ್ತಕ್ಷೇಪ ಸಲ್ಲದು. ಕೃತ್ರಿಮವಾಗಿ ದೇಹವನ್ನು ಸರಿಪಡಿಸಲು ಹೊರಟಾಗ ಅದು ವಿರುದ್ಧ ಪರಿಣಾಮ ಬೀರುತ್ತದೆ. ಮಲಮೂತ್ರಾದಿ ಶರೀರದ ನೈಸರ್ಗಿಕ ವೇಗಗಳನ್ನು ತಡೆಹಿಡಿಯಬಾರದು. ಧಾರ್ಮಿಕವಾಗಿಯೂ ಇವುಗಳನ್ನು ತಡೆಹಿಡಿದು ಪೂಜೆ-ಪಾರಾಯಣ ಮಾಡುವುದು ದೋಷವೇ. ಆದರೆ, ಮನಸ್ಸಿನ ವೇಗಗಳಾದ ದುರಾಸೆ, ದ್ವೇಷ, ಸಿಟ್ಟು, ದುರಭಿಮಾನ ಹಾಗೂ ಲಜ್ಜೆಗಳನ್ನು ನಿಯಂತ್ರಿಸಬೇಕು, ಅದು ಜೀವಕ್ಕೆ ಹಿತ” ಎಂದರು.

ಶಾಸ್ತ್ರೀಯ ನಿದ್ದೆ ಮತ್ತು ಅನಾಹತ ಚಕ್ರ: ಆಧುನಿಕ ವಿಜ್ಞಾನ ಹಾಗೂ ಆಯುರ್ವೇದ ಎರಡೂ ನಿದ್ದೆಯ ಏರುಪೇರಿನಿಂದ ಆಯುಸ್ಸು ಕಡಿಮೆಯಾಗುತ್ತದೆ ಎಂದು ಹೇಳುತ್ತವೆ. ಶಾಸ್ತ್ರೀಯ ಹಾಗೂ ಸಮಪ್ರಮಾಣದ ನಿದ್ದೆಯು ಪರಮಾತ್ಮನ ದರ್ಶನಕ್ಕೆ ಹೆದ್ದಾರಿ. ಯೋಗಶಾಸ್ತ್ರದ ‘ಹೃದಯ ಕಮಲ’ಕ್ಕೂ ಶರೀರದ ಎದೆಗುಂಡಿಗೆಗೂ ವ್ಯತ್ಯಾಸವಿದೆ. ಎದೆಗುಂಡಿಗೆಯ ಹಿಂಭಾಗದಲ್ಲಿ ತೇಜೋಮಯವಾಗಿರುವುದೇ ಅನಾಹತ ಚಕ್ರ (ಹೃದಯ ಕಮಲ). ಇದನ್ನು ಜ್ಞಾನದೃಷ್ಟಿಯಿಂದ ಮಾತ್ರ ಕಾಣಲು ಸಾಧ್ಯ. ತಮಸ್ಸು ಮುಸುಕಿದಾಗ ಈ ಕಮಲ ಮುದುಡಿ ನಿದ್ದೆ ಬರುತ್ತದೆ. ಜಾಗೃತಾವಸ್ಥೆಯಲ್ಲಿ ಅರೆ ಬಿರಿದ ಸ್ಥಿತಿಯಲ್ಲಿದ್ದರೆ, ಸತ್ವಗುಣ ಪ್ರಧಾನವಾದಾಗ ಜ್ಞಾನಿಗಳಿಗೆ ಇದು ಪೂರ್ಣವಾಗಿ ಅರಳುತ್ತದೆ ಎಂದು ವಿವರಿಸಿದರು.


ಗೂಗಲ್ ನೋಡಿ ನೀರು ಕುಡಿಯಬೇಡಿ! “ಇಂದು ಗೂಗಲ್ ನೋಡಿ, ದೇಹ ಕೇಳದಿದ್ದರೂ ಲೆಕ್ಕವಿಟ್ಟು ಅತಿಯಾಗಿ ನೀರು ಕುಡಿಯುವ ಅಭ್ಯಾಸ ಹೆಚ್ಚುತ್ತಿದೆ. ಆದರೆ ದೇಹಕ್ಕೆ ಎಷ್ಟು ನೀರು ಬೇಕು ಎಂಬುದು ದೇಹಕ್ಕೇ ಗೊತ್ತು. ನೀರು ಅಗತ್ಯವಿದ್ದಾಗ ಬಾಯಾರಿಕೆಯ ಮೂಲಕ ದೇಹವೇ ಸೂಚನೆ ನೀಡುತ್ತದೆ, ಆಗಷ್ಟೇ ನೀರು ಕುಡಿಯಬೇಕು. ಅತಿಯಾದ ನೀರಿನ ಸೇವನೆಯೂ ಆರೋಗ್ಯಕ್ಕೆ ಅಪಾಯಕಾರಿ.”
ಭಿಕ್ಷಾಸೇವೆ ಸಲ್ಲಿಕೆ: ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಂಡಲದ ಭೀಮನಕೋಣೆ, ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ ಹಾಗೂ ತೀರ್ಥರಾಜಪುರ ವಲಯಗಳ ಪರವಾಗಿ ಕಿರಣ್ ದಂಪತಿಗಳು ಭಿಕ್ಷಾಸೇವೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ವಿವಿವಿಯ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಲಕ್ಷ್ಮೀನಾರಾಯಣ ಕೆ.ಪಿ, ಸೀತಾರಾಮ ಇಕ್ಕೇರಿ, ರಮೇಶ ಕಾನುಗೋಡು ಹಾಗೂ ದಿನ ಪ್ರಧಾನರಾದ ಚಂದ್ರಶೇಖರ ಹೊಸಗದ್ದೆ ದಂಪತಿಗಳು ಭಾಗವಹಿಸಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ