August 24, 2026

ಭೋಜನವೆಂದರೆ ಅದ್ವೈತ ಸಾಧನೆ: ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು

  • ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು.
  • ರಾತ್ರಿ ವೇಳೆಯ ಕೆಲಸ ದೇಹದ ಜೊತೆ ಮಾಡುವ ಯುದ್ಧ.
  • ಭೋಜನವೆಂದರೆ ಜೀವ-ಜೀವಾದ್ವೈತ.

ಗೋಕರ್ಣ (ಉತ್ತರ ಕನ್ನಡ): ಭೋಜನವೆಂದರೆ ಅದೊಂದು ಅದ್ವೈತ ಸಾಧನೆ. ನಾವು ಸೇವಿಸಿದ ಆಹಾರವು ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ ನಮ್ಮಲ್ಲೇ ಒಂದಾಗುತ್ತದೆ. ಭೂಮಿಯಲ್ಲಿ ಸರ್ವ ಕರ್ಮಗಳನ್ನು ಕಳೆದುಕೊಂಡು ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 06.08.2026 ರಂದು ನಡೆದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಅಜೀರ್ಣವೇ ಸರ್ವ ರೋಗಕ್ಕೂ ಮೂಲ: “ಸೇವಿಸುವ ಆಹಾರವು ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ಶತ್ರುವಾಗಿ ಅನಾರೋಗ್ಯ ಹಾಗೂ ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು, ಇಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎಂಬುದು ಆಯುರ್ವೇದದ ಸೂತ್ರ” ಎಂದರು.

ಜೀವಕ್ಕೆ ಜೀವವಿರುವ ವಸ್ತುವೇ ಆಹಾರ: ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ‘ಅನ್ನಂ ಬ್ರಹ್ಮ’ ಎಂಬ ಭಾವದಿಂದ ಸ್ವೀಕರಿಸಿದಾಗ ಅದು ಮುಕ್ತಿಗೆ ಕರೆದೊಯ್ಯುವ ಸಾಧನವಾಗುತ್ತದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು. ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಗಿಡಮೂಲಿಕೆಗಳಲ್ಲೂ ಸುಪ್ತ ಜೀವವಿದ್ದು, ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ಶ್ರೀಗಳು ವಿವರಿಸಿದರು.

ರಾತ್ರಿ ಕೆಲಸ ದೇಹದ ಮೇಲಿನ ದಾಳಿ: ದೇಹವೆಂಬ ಯಂತ್ರವು ಬೆಳಗಿನ ಹೊತ್ತು ಪೂರ್ಣ ಶಕ್ತಿಯಿಂದ ಕಾರ್ಯಾಚರಿಸಿ, ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ರಾತ್ರಿ ವಿಶ್ರಾಂತಿ ಪಡೆಯುವ ಸಮಯದಲ್ಲಿ ಕೆಲಸ ಮಾಡುವ ಇಂದಿನ ಪ್ರವೃತ್ತಿಯು ನಿಜಕ್ಕೂ ದೇಹದ ಜೊತೆ ಮಾಡುವ ಯುದ್ಧವೇ ಸರಿ ಎಂದು ಅಭಿಪ್ರಾಯಪಟ್ಟರು.

ಮುಂದಿನ ಪೀಳಿಗೆಗೂ ದೋಷ ರವಾನೆ! “ಜೀವವು ಸದಾ ಉತ್ಕೃಷ್ಟ ಆಹಾರವನ್ನೇ ಸ್ವೀಕರಿಸಬೇಕು. ದೋಷಯುಕ್ತವಾದ ಆಹಾರವು ನಮ್ಮ ದೇಹಕ್ಕೆ ಹಾನಿ ಮಾಡುವುದಲ್ಲದೆ, ಮುಂದಿನ ಪೀಳಿಗೆಗೂ ದೋಷವನ್ನು ವರ್ಗಾಯಿಸುತ್ತದೆ. ಆದ್ದರಿಂದ ಜೀವವೆಂಬ ಯಂತ್ರಕ್ಕೆ ಉತ್ತಮ ಆಹಾರವೆಂಬ ಇಂಧನವನ್ನಷ್ಟೇ ನೀಡಬೇಕು.”

ಧಾರ್ಮಿಕ ಪಂಚಾಂಗದ ಕರಡು ಪ್ರತಿ ಸಮರ್ಪಣೆ: ಇದೇ ಸಂದರ್ಭದಲ್ಲಿ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೋ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಅವರು ‘ಪ್ಲವಂಗ’ ನಾಮ ಸಂವತ್ಸರದ ಧಾರ್ಮಿಕ ಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೇರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್ ಹಾಗೂ ದಿನ ಪ್ರಧಾನರಾದ ಗಣಪತಿ ಟಿ. ಆರ್. ವರದಾಮೂಲ ದಂಪತಿಗಳು ಉಪಸ್ಥಿತರಿದ್ದರು.

About The Author

error: Content is protected !!