

ಇಂಟರ್ಮಿಟೆಂಟ್ ಫಾಸ್ಟಿಂಗ್ ಹಾಗೂ ಬ್ರಂಚ್ ಹೊಸ ಸಂಶೋಧನೆಯಲ್ಲ; ೫,೦೦೦ ವರ್ಷಗಳ ಹಿಂದೆಯೇ ಭೀಷ್ಮರು ತಿಳಿಸಿದ್ದಾರೆ.

ಜಠರಾಗ್ನಿ ನಮ್ಮ ವಶವಾದಾಗ ಸಹಜ ಉಪವಾಸ ಸಾಧ್ಯ.

ಮನಸ್ಸಿಗೂ ಜಠರಾಗ್ನಿಗೂ ಇದೆ ಗಾಢ ಸಂಬಂಧ; ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಬಹುದು.

ಗೋಕರ್ಣ: ಸಾಮಾನ್ಯ ವ್ಯಕ್ತಿಯು ಉಸಿರು ಕಟ್ಟಿ ಕುಳಿತಾಗ ಮರಣ ಸಂಭವಿಸಬಹುದು, ಆದರೆ ಯೋಗಿ ಉಸಿರನ್ನು ನಿಯಂತ್ರಿಸಿದಾಗ ಸಮಾಧಿ ಸ್ಥಿತಿಗೇರಿ ಭಗವದಾನಂದವನ್ನು ಹೊಂದುತ್ತಾನೆ. ಉಸಿರನ್ನು ಹಾಗೂ ಜಠರಾಗ್ನಿಯನ್ನು ನಿಯಂತ್ರಣಕ್ಕೆ ಪಡೆದರೆ ಸಹಜ ಉಪವಾಸ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.


ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಉಪವಾಸ’ದ ಕುರಿತಾಗಿ ಅನುಗ್ರಹ ಪ್ರವಚನ ನೀಡಿದ ಶ್ರೀಗಳು, ಮನಸ್ಸಿನ ಶಕ್ತಿ ಹಾಗೂ ಆಹಾರ ಸಂಯಮದ ಕುರಿತು ಮಹತ್ವದ ಸಂದೇಶ ನೀಡಿದರು.
ಮನಸ್ಸು ಮತ್ತು ಜಠರಾಗ್ನಿಯ ಸಂಬಂಧ: ಜಠರಾಗ್ನಿಗೆ ಹಿತ-ಮಿತ-ಮೇಧ್ಯಾಶನವನ್ನು ನೀಡಿದಾಗ ಅಗ್ನಿಯು ನಮ್ಮ ವಶವಾಗುತ್ತದೆ. ಮನಸ್ಸಿಗೆ ದುಃಖವಾದಾಗ ಹಸಿವಾಗದಿರುವುದು ಮನಸ್ಸು ಹಾಗೂ ಜಠರಾಗ್ನಿಯ ಸಂಬಂಧಕ್ಕೆ ಉದಾಹರಣೆ. ಈ ಕುರಿತು ರಷ್ಯಾದ ವಿಜ್ಞಾನಿ ಇವಾನ್ ಪಾವ್ಲೋವ್ ಸುಧೀರ್ಘ ಸಂಶೋಧನೆ ನಡೆಸಿ ನೋಬೆಲ್ ಪುರಸ್ಕಾರ ಪಡೆದಿದ್ದಾರೆ.
ಏಕಾದಶಿ ಆಚರಣೆ: ೧೫ ದಿನಗಳಿಗೊಮ್ಮೆ ಮಾಡುವ ಉಪವಾಸದಿಂದ ರೋಗಗಳು ಬರುವುದಿಲ್ಲ ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆ. ಆದರೆ ಭಾರತೀಯ ಪರಂಪರೆಯಲ್ಲಿ ಇದನ್ನು ಸಾವಿರಾರು ವರ್ಷಗಳಿಂದ ‘ಏಕಾದಶಿ’ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಇಂಟರ್ಮಿಟೆಂಟ್ ಫಾಸ್ಟಿಂಗ್ ಪುರಾತನ ಕಲ್ಪನೆ: ಮಹಾಭಾರತದಲ್ಲಿ ಭೀಷ್ಮರು ಮಧ್ಯಾಹ್ನ ಮತ್ತು ಸಂಜೆಯ ನಂತರ ಮಾತ್ರ ಊಟ ಮಾಡುವುದನ್ನು ಸೂಚಿಸಿ, ಅವರನ್ನು ‘ನಿತ್ಯೋಪವಾಸಿ’ ಎಂದಿದ್ದಾರೆ. ಇಂದಿನ ‘ಇಂಟರ್ಮಿಟೆಂಟ್ ಫಾಸ್ಟಿಂಗ್’ ಹಾಗೂ ‘ಬ್ರಂಚ್’ ಕಲ್ಪನೆಗಳು ಹೊಸದೇನೂ ಅಲ್ಲ. ಆದರೆ ಗಂಟೆಗಂಟೆಗೆ ಆಹಾರ ಸ್ವೀಕರಿಸುವುದು ದೇಹಕ್ಕೆ ಮಾರಕ.
ಧ್ಯಾನಕ್ಕೆ ಖಾಲಿ ಹೊಟ್ಟೆ ಸಹಕಾರಿ: ಆಹಾರದಲ್ಲಿ ತಾಮಸ ಗುಣವಿರುತ್ತದೆ. ಉಪವಾಸವು ತಾಮಸವನ್ನು ದೂರವಿಟ್ಟು ಏಕಾಗ್ರತೆಗೆ ನೆರವಾಗುತ್ತದೆ. ಬ್ರಾಹ್ಮೀ ಮುಹೂರ್ತ ಹಾಗೂ ಸಂಧ್ಯಾಕಾಲದಲ್ಲಿ ಧ್ಯಾನ-ಉಪಾಸನೆ ಮಾಡಲು ಖಾಲಿ ಹೊಟ್ಟೆ ಅತ್ಯಂತ ಪ್ರಶಸ್ತ.
ಗುರುಭಿಕ್ಷಾ ಸೇವೆ: ಧರ್ಮಸಭೆಯಲ್ಲಿ ಸಿದ್ದಾಪುರ ಹವ್ಯಕ ಮಂಡಲದ ಪರವಾಗಿ ಸುರೇಶ ವೆಂಕಟ್ರಮಣ ಹೆಗಡೆ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಮಂಡಲದ ಸತೀಶ ಹೆಗಡೆ ಆಲ್ಮನೆ, ರಾಮಮೂರ್ತಿ ಹೆಗಡೆ ಗೋಳಗೋಡು, ಸೀತಾರಾಮ ಹೆಗಡೆ ಸುಳಗಾರು, ಕಲ್ಪನಾ ತಲವಾಟ, ಚಿದಂಬರ ಗೊಳಿಕೈ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
About The Author




More Stories
ಆಹಾರದ ರಸಗಳಿಗೂ ಭಾವಕ್ಕೂ ನಿಕಟ ಸಂಬಂಧ: ರಾಘವೇಶ್ವರ ಶ್ರೀ ಪ್ರತಿಪಾದನೆ
ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ