August 21, 2026

ಮಂತ್ರಿ ನಾಗೇಂದ್ರ ರಾಜೀನಾಮೆ ನೀಡಲೇಬೇಕು: ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿರುಸಿನ ಹೋರಾಟ!

ಕಾರವಾರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಚಂದ್ರಶೇಖರನ್ ಡೆತ್ ನೋಟ್‌ನಲ್ಲಿ ಸ್ಪಷ್ಟ ಉಲ್ಲೇಖ – ಅನಂತಮೂರ್ತಿ ಹೆಗಡೆ:

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ “ಕಳೆದ ಮೇ 26, 2024 ರಂದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಅವರು ಬರೆದಿಟ್ಟ 6 ಪುಟಗಳ ಡೆತ್ ನೋಟ್‌ನಲ್ಲಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇಲೆಯೇ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಬಳ್ಳಾರಿ ಚುನಾವಣೆಗೆ 20 ಕೋಟಿ ರೂ. ವೆಚ್ಚ ಮಾಡಿರುವ ಮಾಹಿತಿ ಹಾಗೂ ವಾಲ್ಮೀಕಿ ಜನಾಂಗದ ಅಭಿವೃದ್ಧಿಗೆ ಕಾಯ್ದಿರಿಸಿದ್ದ 170 ಕೋಟಿ ರೂ. ಹಣವನ್ನು ಫೇಕ್ ಅಕೌಂಟ್‌ಗಳಿಗೆ ವರ್ಗಾಯಿಸಿರುವ ಎಲ್ಲಾ ದಾಖಲೆಗಳೂ ಲಭ್ಯವಿವೆ. ಬ್ಯಾಂಕ್ ಅಕೌಂಟ್‌ಗಳ ಮೂಲಕವೇ ಪ್ರತಿಯೊಂದು ವಹಿವಾಟು ನಡೆದಿರುವುದರಿಂದ ಈ ಭ್ರಷ್ಟಾಚಾರವನ್ನು ಭೇದಿಸಲು ಮೂರೇ ದಿನ ಸಾಕು. ಬಡವರ ಹಣ ಕೊಳ್ಳೆಹೊಡೆದ ಸಚಿವ ನಾಗೇಂದ್ರರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು,” ಎಂದು ತೀವ್ರವಾಗಿ ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯಕ್, ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್, ಶಿರಸಿ ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ಸಿದ್ದಾಪುರ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಾಯ್ಸನ್ ಡಿಸೋಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯಕ್, ಬಿಜೆಪಿ ಪ್ರಮುಖ ರಾಜು ಭಂಡಾರಿ, ರೈತ ಮೋರ್ಚಾ ಉಪಾಧ್ಯಕ್ಷರುಗಳಾದ ಸುರೇಶ್ ನಾಯಕ್, ಬಸಣ್ಣ ಕುರುಬಕಟ್ಟಿ, ಯಲ್ಲಾಪುರ ರೈತ ಮೋರ್ಚಾ ಅಧ್ಯಕ್ಷ ರಾಮಣ್ಣ ಚಿಕ್ಯಾನಮನೆ ಸೇರಿದಂತೆ ಅನೇಕ ಮುಖಂಡರು ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ನಾಯ್ಕ್ (ಶಿರಸಿ), ಮಾರುತಿ ನಾಯ್ಕ್ (ಕಾನಗೋಡ), ನಾಗರಾಜ್ ನಾಯ್ಕ್ (ಬೆಡಕಣಿ), ಪ್ರಸನ್ನ ಹೆಗಡೆ, ತೋಟಪ್ಪ ನಾಯ್ಕ, ಮಹಾಂತೇಶ ಹಾದಿಮನಿ, ಕಿಶನ್ ಕಾಂಬ್ಳೆ, ನಾಗೇಶ್ ಕುರ್ಡೇಕರ್ ಹಾಗೂ ಶಿರಸಿ-ಸಿದ್ದಾಪುರ ವ್ಯಾಪ್ತಿಯ ರೈತ ಮೋರ್ಚಾದ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

error: Content is protected !!