August 24, 2026

ಗೋಕರ್ಣದಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ಕ್ಕೆ ವಿಧ್ಯುಕ್ತ ಚಾಲನೆ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ 33ನೇ ವರ್ಷದ ವ್ರತದೀಕ್ಷೆ

ಗೋಕರ್ಣ (ಜು. 29): ಸಮಾಜಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಗುರುವಿನ ಮತ್ತು ಮಠದ ಮುಖ್ಯ ಕರ್ತವ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಅವರು ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ಜುಲೈ 29 ರಂದು ಸಾಂಪ್ರದಾಯಿಕ ವ್ಯಾಸಪೂಜೆಯೊಂದಿಗೆ ನೆರವೇರಿದ ತಮ್ಮ 33ನೇ ವರ್ಷದ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಜುಲೈ 29 ರಿಂದ ಸೆಪ್ಟೆಂಬರ್ 26 ರವರೆಗೆ ಅರವತ್ತು ದಿನಗಳ ಕಾಲ ಈ ಚಾತುರ್ಮಾಸ್ಯ ವ್ರತ ವೈಭವದಿಂದ ನಡೆಯಲಿದೆ.

ಸಮಾಜಕ್ಕೆ ಸರಿದಾರಿ ತೋರುವುದೇ ಗುರುವಿನ ಕಾರ್ಯ:

ಆಶೀರ್ವಚನ ನೀಡಿದ ಶ್ರೀಗಳು, “ಶಂಕರಾಚಾರ್ಯರು ಸೈನ್ಯ ಮತ್ತು ಸಂಪತ್ತು ಇಲ್ಲದಿದ್ದರೂ ದೇಶಾದ್ಯಂತ ಸಂಚರಿಸಿ ಧರ್ಮ ಸಂರಕ್ಷಣೆ ಮಾಡಿದರು. ಅದೇ ಹಾದಿಯಲ್ಲಿ ಸರಿ ವಿಚಾರ ತಿಳಿಸುವವರಿಗೆ ಶತ್ರುಗಳು ಹುಟ್ಟುವುದು ಪ್ರಕೃತಿ ಸಹಜ. ರಾಮ-ಕೃಷ್ಣರಿಂದ ಹಿಡಿದು ಸಮಸ್ತ ಮಹಾತ್ಮರ ಜೀವನದಲ್ಲೂ ಇದು ನಡೆದಿದೆ. ಕಳೆದ ವರ್ಷ ಭಾಷೆಗೆ ಸಂಬಂಧಿಸಿದ ‘ಸ್ವಭಾಷಾ ಚಾತುರ್ಮಾಸ್ಯ’ ನಡೆಸಲಾಗಿತ್ತು. ಈ ವರ್ಷ ನಾವು ಸೇವಿಸುವ ಆಹಾರದ ಕುರಿತು ಜಾಗೃತಿ ಮೂಡಿಸಲು ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಸಂಕಲ್ಪಿಸಲಾಗಿದೆ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಆದರೆ ಇಂದು ಆಹಾರದ ಬಗ್ಗೆ ಸಮರ್ಪಕ ಮಾಹಿತಿ ಎಲ್ಲಿಯೂ ಸಿಗದೆ, ತುತ್ತಿನ ಚೀಲ ತುಂಬಿಸುವುದೇ ಮುಖ್ಯವಾಗಿದೆ. ಆಹಾರದ ಮಹತ್ವ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಯ ಪುನರುಜ್ಜೀವನವೇ ಈ ಬಾರಿಯ ಪರಿಕಲ್ಪನೆ” ಎಂದರು.

ವ್ಯಾಸಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ:

ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀರಾಮಾದಿ ದೇವರ ಪೂಜೆ ನೆರವೇರಿಸಿ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆ ಮಾಡಿ ಮಠೀಯ ಪದ್ಧತಿಯಂತೆ ವ್ಯಾಸಪೂಜೆ ನೆರವೇರಿಸಲಾಯಿತು. ನಂತರ ಗರುಡಾಸನದಲ್ಲಿ ವಿರಾಜಮಾನರಾದ ಶ್ರೀಗಳು ಚಾತುರ್ಮಾಸ್ಯ ವ್ರತಸಂಕಲ್ಪ ಸ್ವೀಕರಿಸಿದರು. ಭಕ್ತಾದಿಗಳು ಹಾಗೂ ಶಿಷ್ಯವೃಂದದವರು ಶ್ರೀಗಳ ಅನುಷ್ಠಾನಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿ, ಕೃಪಾಶೀರ್ವಾದ ಕೋರಿದರು.


ಪ್ರತಿದಿನ ಶ್ರೀಗಳಿಂದ ಆಹಾರದ ಕುರಿತು ವಿಶೇಷ ಪ್ರವಚನ ಮಾಲಿಕೆ, ಸಾಂಪ್ರದಾಯಿಕ ಪಾರಂಪರಿಕ ಆಹಾರ ಪರಿಚಯ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ನೆರವೇರಲಿವೆ. ಸಕುಟುಂಬ ಸಮೇತರಾಗಿ ಆಗಮಿಸಿ ವ್ರತಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಠದ ಮಾಧ್ಯಮ ಸಂಯೋಜಕರಾದ ಸಂದೇಶ ತಲಕಾಲಕೊಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾರ್ಯಕ್ರಮದಲ್ಲಿ ಮುಗಳಿ ತಿರುಮಲೇಶ್ವರ ಭಟ್ (ಸರ್ವಸೇವೆ), ಮಂಜುನಾಥ ಸುವರ್ಣಗದ್ದೆ ದಂಪತಿ (ಸಭಾಪೂಜೆ), ಜಿ.ಎಸ್. ಹೆಗಡೆ ದಂಪತಿ (ದಿನ ಪ್ರಧಾನರು) ಹಾಗೂ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ರಾಜ್ಯ-ಹೊರರಾಜ್ಯಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿ ವ್ಯಾಸಮಂತ್ರಾಕ್ಷತೆ ಸ್ವೀಕರಿಸಿದರು.

About The Author

error: Content is protected !!