August 23, 2026

ಆಧ್ಯಾತ್ಮ – ಆರೋಗ್ಯ ಹೂವು-ಪರಿಮಳದಂತೆ ಅವಿನಾಭಾವ: ವಿಭೂತಿಪುರ ಮಠದ ಶ್ರೀ

ಬಾಹ್ಯ ವಿಷಯಗಳಿಂದ ಅಂತರಂಗದತ್ತ ಮನಸ್ಸನ್ನು ತಿರುಗಿಸುವುದೇ ನಿಜವಾದ ಆಧ್ಯಾತ್ಮ.

ಆರೋಗ್ಯ ಹಾಗೂ ನೆಮ್ಮದಿಗೆ ಮನಸ್ಸಿನ ಸ್ಥಿರತೆ ಅತ್ಯಗತ್ಯ.

ಭಜನೆ, ಪ್ರಾರ್ಥನೆ ಹಾಗೂ ಧ್ಯಾನ ಭಗವಂತನನ್ನು ತಲುಪುವ ಮಾರ್ಗಗಳು.

    ಶಿರಸಿ: ಆಧ್ಯಾತ್ಮ ಮತ್ತು ಆರೋಗ್ಯವು ಹೂವು ಹಾಗೂ ಅದರ ಪರಿಮಳದಂತೆಯೇ ಅವಿನಾಭಾವ ಸಂಬಂಧ ಹೊಂದಿವೆ ಎಂದು ಬೆಂಗಳೂರಿನ ವಿಭೂತಿಪುರ ಮಠದ ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಗಣೇಶನಗರದ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ನಡೆದ ಗುರುವಂದನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಅಂತರಂಗದತ್ತ ಮನಸ್ಸು ತಿರುಗಲಿ: “ಆಧ್ಯಾತ್ಮ ಎಂದರೆ ಸಂಸಾರ ತೊರೆದು ಕಾಡಿಗೆ ಹೋಗುವುದಲ್ಲ. ಶಬ್ದ, ಸ್ಪರ್ಶ, ರೂಪ, ರಸ ಹಾಗೂ ಗಂಧದಂತಹ ಬಾಹ್ಯ ವಿಷಯಗಳತ್ತ ಓಡುವ ಮನಸ್ಸನ್ನು ಅಂತರಂಗದತ್ತ ತಿರುಗಿಸುವುದೇ ನಿಜವಾದ ಆಧ್ಯಾತ್ಮ. ಮನಸ್ಸನ್ನು ಅಂತರಂಗದತ್ತ ಕೊಂಡೊಯ್ದರೆ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ನೆಲೆಸುತ್ತದೆ. ಮಠಾಧೀಶರೂ ದೊಡ್ಡ ಜವಾಬ್ದಾರಿ ಹೊತ್ತ ಸಂಸಾರಿಗಳಿದ್ದಂತೆ, ಆದರೆ ಎಲ್ಲ ವ್ಯವಹಾರಗಳ ಮಧ್ಯೆಯೂ ಅಂಟಿಕೊಳ್ಳದೆ ಬದುಕಬೇಕು. ಸಂಸಾರ ಬಂಧನವಾಗುವುದಕ್ಕೂ, ಮೋಕ್ಷದತ್ತ ಸಾಗುವುದಕ್ಕೂ ಮನಸ್ಸೇ ಕಾರಣ” ಎಂದು ಹೇಳಿದರು.

    ಮಾನಸಿಕ ಒತ್ತಡವೇ ರೋಗಕ್ಕೆ ಮೂಲ: ಕೊಟ್ಟೂರಿನ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಅಭಿರುಚಿ ಬದಲಾವಣೆಯಿಂದ ಆರೋಗ್ಯವೂ ಹಾಳಾಗುತ್ತಿದೆ. ಸಿಟ್ಟು, ಕೋಪ ಹಾಗೂ ಮಾನಸಿಕ ಒತ್ತಡದಿಂದ ದೇಶದಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದ್ದು, ಮನಸ್ಸಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ” ಎಂದರು. ಹುಕ್ಕೇರಿಯ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಾದಗಿರಿ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೆಡಗೆ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಪ್ರಕೃತಿ, ಆರೋಗ್ಯ ಮತ್ತು ಸತ್ಸಂಗದ ಮಹತ್ವದ ಕುರಿತು ಮಾತನಾಡಿದರು.

    ಹೊಟ್ಟೆ ಬೆಳೆದರೆ ಅನಾರೋಗ್ಯ ಬೆಳೆಯುತ್ತದೆ! “ಹೊಟ್ಟೆ ನಮ್ಮ ಎದೆಗಿಂತ ಮುಂದೆ ಬರದಂತೆ ನೋಡಿಕೊಂಡರೆ ನೂರು ವರ್ಷ ಸುಖವಾಗಿ ಬದುಕಬಹುದು. ಅಡುಗೆ ಮನೆಯನ್ನೇ ಔಷಧಾಲಯವನ್ನಾಗಿ ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರ, ನಿಯಮಿತ ಜೀವನಶೈಲಿ ಮತ್ತು ಆಧ್ಯಾತ್ಮಿಕ ಚಿಂತನೆ ಒಂದಾದಾಗ ಉತ್ತಮ ಆರೋಗ್ಯ ಸಾಧ್ಯ.” — ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರ ಮಠ

    ಧ್ಯಾನ ಎಂದರೆ ಭಗವಂತನ ಸಂವಾದ “ಭಜನೆಯು ಭಗವಂತನತ್ತ ಕೊಂಡೊಯ್ಯುವ ಮಾರ್ಗವಾದರೆ, ಪ್ರಾರ್ಥನೆಯು ಭಗವಂತನೊಂದಿಗೆ ಸಂವಾದ ನಡೆಸುವುದು ಹಾಗೂ ಧ್ಯಾನವು ಭಗವಂತನು ಮನುಷ್ಯನೊಂದಿಗೆ ಮಾತನಾಡುವ ಅನುಭವವಾಗಿದೆ.” — ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ

    ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಶ್ರೀ ಕುಮಾರಸ್ವಾಮೀಜಿ ಹಾಗೂ ಡಾ. ವೆಂಕಟರಮಣ ಹೆಗಡೆ, ನಾರಾಯಣ ಹೆಗಡೆ, ಭವಾನಿ ಹೆಗಡೆ, ಸಂಗೀತಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

    About The Author

    error: Content is protected !!