August 23, 2026

ಊಟ ಮಾಡದೇ ಇರುವುದು ಉಪವಾಸವಲ್ಲ, ಹಸಿವು ಅರಿವಾಗದ ಸ್ಥಿತಿಯೇ ನಿಜವಾದ ಉಪವಾಸ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಹಸಿವನ್ನು ಕಟ್ಟಿದರೆ ಅನಾರೋಗ್ಯ; ಭಾವದ ಜಾಗೃತಿಯೇ ಉಪವಾಸ

ಗೋಕರ್ಣದ ಅಶೋಕೆಯಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆ

    ಗೋಕರ್ಣ: “ಹಸಿವನ್ನು ಕಟ್ಟುವುದು ಉಪವಾಸವಲ್ಲ. ಹಸಿವನ್ನು ಕಟ್ಟುವುದು ದೇಹದ ನೈಸರ್ಗಿಕ ವೇಗವನ್ನು ತಡೆಯುವ ಪ್ರಕ್ರಿಯೆಯಾಗಿದ್ದು, ಇಂತಹ ಸಹಜ ಕ್ರಿಯೆಯನ್ನು ತಡೆಯುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಸಿವಿನ ಅರಿವೇ ಆಗದ ಸ್ಥಿತಿಯೇ ನಿಜವಾದ ಉಪವಾಸ,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

    ಗೋಕರ್ಣದ ಅಶೋಕೆಯಲ್ಲಿರುವ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಅಂಗವಾಗಿ ರವಿವಾರ (09.08.2026) ನಡೆದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ “ಉಪವಾಸ” ಎಂಬ ವಿಷಯದ ಕುರಿತು ಶ್ರೀಗಳು ಆಶೀರ್ವಚನ ನೀಡಿದರು.

    ಹೊಟ್ಟೆ ಕೆಲಸ ನಿಲ್ಲಿಸಿದಾಗ ಭಾವ ಜಾಗೃತಿ: “ಹೊಟ್ಟೆ ಕೆಲಸ ಮಾಡುವಾಗ ಹೃದಯ ಕೆಲಸ ಮಾಡುವುದಿಲ್ಲ. ಆದರೆ ಹೊಟ್ಟೆ ತನ್ನ ಕೆಲಸವನ್ನು ನಿಲ್ಲಿಸಿದಾಗ ಹೃದಯದಲ್ಲಿ ಭಾವನೆಗಳು ಜಾಗೃತವಾಗುತ್ತವೆ. ನಿರಾಹಾರವು ನಿಜವಾದ ಉಪವಾಸವಾಗಬೇಕಾದರೆ ಅದಕ್ಕೆ ಅಚಲವಾದ ಭಕ್ತಿ ಮತ್ತು ಭಾವನೆ ಅತ್ಯಗತ್ಯ. ಕೇವಲ ಊಟ ಮಾಡದಿರುವುದು ಮಾತ್ರ ಉಪವಾಸ ವ್ರತದ ಭಂಗವಲ್ಲ, ಮನಸ್ಸಿನಲ್ಲಿ ಹಸಿವಿನ ಭಾವನೆ ಮೂಡಿದರೂ ಉಪವಾಸ ವ್ರತ ಭಂಗವಾದಂತೆಯೇ ಸರಿ,” ಎಂದು ವಿವರಿಸಿದರು.

    ವಾಲ್ಮೀಕಿ ಹಾಗೂ ರಮಣ ಮಹರ್ಷಿಗಳ ಉದಾಹರಣೆ: ವಾಲ್ಮೀಕಿ ಮಹರ್ಷಿಗಳ ತಪಸ್ಸಿನ ಪ್ರಸಂಗವನ್ನು ಉಲ್ಲೇಖಿಸಿದ ಶ್ರೀಗಳು, “ವಾಲ್ಮೀಕಿಗಳು ವರ್ಷಗಳ ಕಾಲ ಅಲುಗಾಡದೇ ತಪಸ್ಸಿನಲ್ಲಿ ಕುಳಿತಾಗ ಅವರ ಮೇಲೆ ಹುತ್ತ ಬೆಳೆಯಿತು. ಆ ಸಮಯದಲ್ಲಿ ಅವರಿಗೆ ಆಹಾರದ ನೆನಪಾಗಲಿಲ್ಲ ಮತ್ತು ರಾಮನಾಮ ಮನಸ್ಸಿನಿಂದ ಮರೆಯಾಗಲಿಲ್ಲ. ಹಾಗಾಗಿಯೇ ಅವರು ಸಹಜ ಉಪವಾಸದಲ್ಲಿದ್ದರು. ಇದೇ ರೀತಿಯ ಸ್ಥಿತಿಯನ್ನು ವಿಶ್ವಾಮಿತ್ರರು, ಹಿರಣ್ಯಕಶಿಪು ಹಾಗೂ ರಮಣ ಮಹರ್ಷಿಗಳ ಚರಿತ್ರೆಯಲ್ಲೂ ಕಾಣಬಹುದು. ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿ ಮಗ್ನವಾದಾಗ ಸಮಾಧಿ ಸ್ಥಿತಿ ಉಂಟಾಗಿ ನಿಜವಾದ ಉಪವಾಸ ಸಹಜವಾಗಿಯೇ ಏರ್ಪಡುತ್ತದೆ,” ಎಂದರು.

    ಸಾಮಾನ್ಯರೂ ಆಚರಿಸಬಹುದು: ತಮ್ಮ ಪೂರ್ವಾಶ್ರಮದ ದಿನಗಳನ್ನು ಸ್ಮರಿಸಿದ ಶ್ರೀಗಳು, “ನಾವು ಸಂನ್ಯಾಸ ಸ್ವೀಕಾರಕ್ಕೂ ಮುನ್ನ ಮಹಾಭಾರತ ಅಧ್ಯಯನ ಮಾಡುವಾಗ ಆಹಾರ-ನಿದ್ರೆಗಳ ಪರಿವೇ ಇರುತ್ತಿರಲಿಲ್ಲ. ವಿಷಯದಲ್ಲಿ ಸಂಪೂರ್ಣ ಮಗ್ನರಾದಾಗ ಆಹಾರದ ನೆನಪೇ ಬರುವುದಿಲ್ಲ. ಉಪವಾಸವನ್ನು ಕೇವಲ ಮಹಾತ್ಮರು ಮಾತ್ರವಲ್ಲ, ಸಾಮಾನ್ಯ ಜನರೂ ಸಹ ಸೂಕ್ತ ಭಾವನೆಯೊಂದಿಗೆ ಆಚರಿಸಬಹುದು,” ಎಂದು ತಿಳಿಸಿದರು.

    ಧರ್ಮಸಭೆಯಲ್ಲಿ ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಪ್ರವೀಣ ಭೀಮನಕೋಣೆ, ಶ್ರೀನಾಥ ಸಾರಂಗ, ಶ್ರೀವತ್ಸ ಭೀಮನಕೋಣೆ ಹಾಗೂ ದಿನ ಪ್ರಧಾನರಾದ ಲಕ್ಷ್ಮೀನಾರಾಯಣ ಹೆಗಡೆ ಸಾಣ್ಮನೆ ದಂಪತಿಗಳು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

    About The Author

    error: Content is protected !!